ಹಣದುಬ್ಬರಕ್ಕೆ ಕಡಿವಾಣ ಅಗತ್ಯ: ರಾಜನ್
ಭುವನೇಶ್ವರ, ಮೇ 22: ಭಾರತದಲ್ಲಿ ರಚನಾತ್ಮಕ ಸುಧಾರಣೆಗಳನ್ನು ವೇಗಗೊಳಿಸುವುದು ರಾಜಕೀಯವಾಗಿ ಕಷ್ಟ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ. ಇದೇ ವೇಳೆ ಬೆಳವಣಿಗೆಯಲ್ಲಿ ವೇಗ ತರಲು ಬ್ಯಾಂಕ್‌ಗಳ ಶುದ್ಧೀಕರಣ ಮತ್ತು ಹಣದುಬ್ಬರವನ್ನು ತಡೆಯುವುದು ಅಗತ್ಯ ಎಂದು ಅವರು ಹೇಳಿಕೊಂಡಿದ್ದಾರೆ. ಕಾರ್ಮಿಕ ಮಾರುಕಟ್ಟೆ ಸುಧಾರಣೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಆದರೆ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ರಾತ್ರಿ ಜಾಗತಿಕ ಆರ್ಥಿಕತೆ ಮತ್ತು ಭಾರತ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದ ಐಎಂಎಫ್‌ನ ಮಾಜಿ ಮುಖ್ಯ ಆರ್ಥಿಕತಜ್ಞ, ಅಂತಾರಾಷ್ಟ್ರೀಯ ವಿತ್ತೀಯ ನೀತಿಯ ಕಾನೂನುಗಳನ್ನು ಬದಲಾಯಿಸಬೇಕು ಎಂದು ಹೇಳುತ್ತಾ ಭಾರತದಂತಹ ಈಗಷ್ಟೇ ಹೊರಹೊಮ್ಮುತ್ತಿರುವ ಮಾರುಕಟ್ಟೆಗಳು ಜಾಗತಿಕ ನೀತಿಗಳನ್ನು ರೂಪಿಸುವಲ್ಲಿ ತಮ್ಮ ಅಭಿಪ್ರಾಯವನ್ನೂ ಕೇಳಬೇಕು ಎಂದು ತಿಳಿಸಲು ತಮ್ಮ ಧ್ವನಿಯನ್ನು ಏರಿಸಿ ಮಾತನಾಡಬೇಕು ಎಂದು ಕರೆ ನೀಡಿದರು. ಭಾರತೀಯ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಿಂತ ಸ್ವಲ್ಪ ಗಟ್ಟಿಯಾಗಿದ್ದು ಎರಡು ಬರಗಾಲ ಮತ್ತು ಅಶಕ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯ ಹೊರತಾಗಿಯೂ 7.5% ಬೆಳವಣಿಗೆಯನ್ನು ಕಂಡಿದೆ ಎಂದವರು ತಿಳಿಸಿದರು. ಎರಡು ಬರಗಾಲ ಮತ್ತು ಅಶಕ್ತ ಮಾರುಕಟ್ಟೆಯ ಹೊರತಾಗಿಯೂ ದೊಡ್ಡ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಂಡ ಪರಿಣಾಮ ನಾವು 7.5% ಬೆಳವಣಿಗೆಯನ್ನು ದಾಖಲಿಸಿದ್ದೇವೆ ಎಂದವರು ತಿಳಿಸಿದರು. ದೊಡ್ಡ ಮಟ್ಟದಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ದೇಶದ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಮತ್ತು ಬ್ಯಾಂಕ್‌ಗಳನ್ನು ಶುದ್ಧೀಕರಣಗೊಳಿಸುವ ಅಗತ್ಯವೂ ಇದೆ ಎಂದು ರಾಜನ್ ತಿಳಿಸಿದರು. ಸುಧಾರಣೆಗಳನ್ನು ಪಾಲಿಸುವುದರಿಂದ ಅಂತಾರಾಷ್ಟ್ರೀಯ ಮತ್ತು ದೇಶೀಯ ಹೂಡಿಕೆದಾರರನ್ನು ಆಕರ್ಷಿಸಬಹುದು ಮತ್ತು ಚಟುವಟಿಕೆಗಳನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು. ಆರ್ಥಿಕತೆಯ ಸಾಮರ್ಥ್ಯವನ್ನು ಹೆಚ್ಚಿ ಸಲು ರಚನಾತ್ಮಕ ಸುಧಾರಣೆ ಮುಖ್ಯ ಎಂದು ತಿಳಿಸಿದ ಆರ್‌ಬಿಐ ಗವರ್ನರ್ ಸ್ಪರ್ಧೆ ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಭಾಗವಹಿಸುವಿಕೆಯ ಮಟ್ಟವನ್ನು ಏರಿಸುವ ಮೂಲಕ ಹೆಚ್ಚೆಚ್ಚು ಜನರನ್ನು ಕಾರ್ಯಪಡೆಗೆ ಸೇರಿಸಬೇಕು ಎಂದು ತಿಳಿಸಿದರು. ರಾಜಕೀಯವಾಗಿ ರಚನಾತ್ಮಕ ಸುಧಾರಣೆಗಳಿಗೆ ವೇಗ ನೀಡುವುದು ಕಷ್ಟ ಮತ್ತು ಕಾರ್ಮಿಕ ಮಾರುಕಟ್ಟೆಯ ಸುಧಾರಣೆ ಬೆಳವಣಿಗೆಯನ್ನು ಉತ್ತೇಜಿಸಿದರೂ ಅದಕ್ಕೆ ವಿರೋಧ ವ್ಯಕ್ತವಾಗಬಹುದು ಎಂದವರು ತಿಳಿಸಿದರು.





