ಬಿಸಿಸಿಐ ನೂತನ ಅಧ್ಯಕ್ಷ ಠಾಕೂರ್‌ರಿಂದ ಸುಧಾರಣೆಗಳ ಘೋಷಣೆ

ಮುಂಬೈ, ಮೇ 22: ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅನುರಾಗ್ ಠಾಕೂರ್ ಮುಂಬರುವ ದಿನಗಳಲ್ಲಿ ಬಿಸಿಸಿಐ ಜಾರಿಗೆ ತರಲು ಉದ್ದೇಶಿಸಿರುವ ಪ್ರಮುಖ 10 ಸುಧಾರಣೆ/ ಕಾರ್ಯಕ್ರಮಗಳ ಪಟ್ಟಿಯನ್ನು ಘೋಷಿಸಿದ್ದಾರೆ.
1.ಬಿಸಿಸಿಐ ರಾಷ್ಟ್ರೀಯ ತಂಡದ ಪ್ರಮುಖ ಕೋಚ್ ಹುದ್ದೆಗೆ ಜಾಹೀರಾತು ನೀಡಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಜು.10 ಕೊನೆಯ ದಿನಾಂಕ.
2.ಬರಗಾಲದಂತಹ ಬಿಕ್ಕಟ್ಟನ್ನು ನಿಭಾಯಿಸಲು ಮಳೆ ನೀರು ಕೊಯ್ಲು, ಕೊಳಚೆ ನೀರು ಶುದ್ದೀಕರಣ, ಜಲ ಸಂರಕ್ಷಣೆ ಯೋಜನೆ, ಸೋಲಾರ್ ಪ್ಯಾನೆಲ್‌ಗಳ ಬಳಕೆಗಾಗಿ ಒಂದು ವರ್ಷದ ಅವಧಿಗೆ 100 ಕೋಟಿ ರೂ. ಮೀಸಲಿಡುವುದು.
3. ಅಂಧ, ಕಿವುಡ ಹಾಗೂ ಮೂಕ ಕ್ರಿಕೆಟಿಗರಿಗೆ ನೆರವಾಗಲು ಮುಂದಿನ 5 ವರ್ಷಗಳ ಕಾಲ 5 ಕೋಟಿ ರೂ. ನಿಧಿ ಸ್ಥಾಪನೆ
4. ಲೋಧಾ ಸಮಿತಿಯ ಸಲಹೆಯಂತೆ ಕೆಲವೊಂದು ಸುಧಾರಣೆ ಜಾರಿಗೆ ತರಲು ಸಂತೋಷ್ ರಂಗ್ಣೇಕರ್‌ರನ್ನು ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಆಗಿ ನೇಮಕ ಮಾಡುವುದು.
5. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿಶೇಷ ವಿಕಲಚೇತನರಿಗೆ ಕನಿಷ್ಠ ಶೇ.10ರಷ್ಟು ಉಚಿತ ಟಿಕೆಟ್‌ಗಳನ್ನು ಕಾಯ್ದಿರಿಸುವುದು.
6.: ವಿಕಲಚೇತನರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಆಸನಗಳ ವ್ಯವಸ್ಥೆ
7. ಪ್ರೇಕ್ಷಕರಿಗೆ ಅನುಕೂಲವಾಗುವಂತೆ ದೇಶದ ಎಲ್ಲ ಸ್ಟೇಡಿಯಂಗಳಲ್ಲಿ ನಂಬರ್ ಸಹಿತ ಸೀಟುಗಳಿರಬೇಕು.
8. ಕ್ರಿಕೆಟ್ ಅಭಿಮಾನಿಗಳಿಗೆ ಸಂಬಂಧಿತ ಮಾಹಿತಿ ಹಾಗೂ ಅಂಕಿ-ಅಂಶವನ್ನು ಒದಗಿಸಲು ಎಲ್ಲ ರಾಜ್ಯಗಳ ಕ್ರಿಕೆಟ್ ಘಟಕಗಳು ಅಧಿಕೃತ ಫೇಸ್‌ಬುಕ್/ಟ್ವಿಟ್ಟರ್ ಖಾತೆ ಹಾಗೂ ವೆಬ್‌ಸೈಟ್‌ಗಳನ್ನು ಸ್ಥಾಪಿಸಲು ಸೂಚನೆ ನೀಡುವುದು.
9. ಬಿಸಿಸಿಐಯಿಂದ ಲೈಸನ್ಸ್ ಪಡೆದ ಮೊಬೈಲ್ ಕೋಚಿಂಗ್ ಆ್ಯಪ್‌ನ್ನು ಸ್ಥಾಪಿಸಬೇಕು. ದೂರದ ಪ್ರದೇಶಗಳಲ್ಲಿರುವ ಕ್ರಿಕೆಟ್ ಅಕಾಡೆಮಿಗಳು ಇದನ್ನು ಬಳಸಿಕೊಂಡು ಕೋಚಿಂಗ್‌ನ್ನು ಪಡೆಯಬೇಕು.
10.:ಭಾರತದ ಮಹಿಳಾ ಕ್ರಿಕೆಟಿಗರ ಕೇಂದ್ರ ಒಪ್ಪಂದವನ್ನು ಜಾರಿಗೆ ತರಬೇಕು. ಈ ಬಗ್ಗೆ ಒಂದು ತಿಂಗಳಲ್ಲಿ ವಿವರವಾದ ವರದಿ ಸಲ್ಲಿಸಬೇಕು.







