ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರು: ಸಚಿವ ಖಾದರ್ ಭರವಸೆ

ಬೆಂಗಳೂರು, ಮೇ 22: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕನ ಹೆಸರಿಡಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ತೌಳವ ವೀರ ರಾಣಿಯ ಸಾಹಸ ಕಥನ ಅಬ್ಬಕ್ಕ ಚರಿತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರಿಡಲು ಮೊದಲು ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ನಲ್ಲಿ ಅನುಮೋದನೆ ದೊರಕಬೇಕು. ಅನಂತರ ರಾಜ್ಯ ಸರಕಾರ ಈ ವಿಚಾರವನ್ನು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ವೀರರಾಣಿ ಅಬ್ಬಕ್ಕ ಅವರು ವಿದೇಶಿಯರ ಆಕ್ರಮಣದ ವಿರುದ್ಧ ಸೆಟೆದು ನಿಂತು ಹೋರಾಡಿದ ಪ್ರಪ್ರಥಮ ಮಹಿಳೆ. ಅಬ್ಬಕ್ಕನ ಸಾಧನೆ ಮತ್ತು ಮಹತ್ವವನ್ನು ಇಂದಿನ ವಿದ್ಯಾರ್ಥಿ ಮತ್ತು ಯುವಕರಿಗೆ ಪರಿಚಯಿಸಬೇಕು. ಈ ಮೂಲಕ ದೇಶದ ಮೂಲೆ -ಮೂಲೆಗೂ ಅವರ ಹೆಸರನ್ನು ಚಿರಪರಿಚಿತಗೊಳಿಸಬೇಕು ಎಂದು ಹೇಳಿದರು. ರಾಣಿ ಅಬ್ಬಕ್ಕ ಅವರಿಗೆ ರಾಜ್ಯದಲ್ಲಿ ಹೆಚ್ಚಿನ ಮಾನ್ಯತೆ ಸಿಕ್ಕಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮಂಗಳೂರು ಈ ಹಿಂದೆ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಆದುದರಿಂದ ಅಬ್ಬಕ್ಕನ ಸಾಧನೆ ಮತ್ತು ಹೋರಾಟ ರಾಜ್ಯದ ಜನತೆಯ ಅರಿವಿಗೆ ಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಅಬ್ಬಕ್ಕ ಉತ್ಸವ ಸಮಿತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಗೆ ಅಬ್ಬಕ್ಕ ರಾಣಿ ರಸ್ತೆ ಎಂದು ಮರು ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಈಗಾಗಲೇ ಇರುವ ರಸ್ತೆಯ ಹೆಸರು ಬದಲಾಯಿಸಿದರೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಹೀಗಾಗಿ ಹೊಸ ರಸ್ತೆ ಅಥವಾ ಯಾವುದಾದರೊಂದು ರೈಲ್ವೆ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು ಇಡುವುದು ಸೂಕ್ತ ಎಂದು ಪ್ರತಿಕ್ರಿಯಿಸಿದರು.
ನಗರದ ಯಶವಂತಪುರದಲ್ಲಿರುವ ಅಬ್ಬಕ್ಕ ರಾಣಿ ಪ್ರತಿಮೆ ಅಭಿವೃದ್ಧಿಪಡಿಸಲು ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದ ಅವರು, ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಒತ್ತಡ ಹೇರಲಾಗುವುದು ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ರಾಣಿ ಅಬ್ಬಕ್ಕನವರ ಸಾಹಸ ಮತ್ತು ಹೋರಾಟದ ಕುರಿತು ಯುವಕರಲ್ಲಿ ಅರಿವು ಮೂಡಿಸಲು ಅಬ್ಬಕ್ಕ ಹೆಸರಿನಲ್ಲಿ ಸಾಹಸ ಕ್ರೀಡಾ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ 1ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಶಾಸಕ ಕೆ. ಜಯರಾಮಶೆಟ್ಟಿ, ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ, ಸಾಹಿತಿ ಡಾ.ಇಂದಿರಾ ಎಸ್. ಹೆಗ್ಡೆ, ಅನಿತಾ ಸುರೇಂದ್ರ ಕುಮಾರ್‌ಸೇರಿದಂತೆ ಇತರರು ಉಪಸ್ಥಿತರಿದ್ದರು.







