ನಾಗರೀಕ ಸೇವಾ ಪರೀಕ್ಷೆಗಳಿಗೆ ವಯೋಮಿತಿ ಕಡಿಮೆ ಮಾಡಿ : ಸರಕಾರಕ್ಕೆ ಯುಪಿಎಸ್ಸಿ ಶಿಫಾರಸು

ಹೊಸದಿಲ್ಲಿ, ಮೇ 23 : ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂದು ಕನಸು ಹೊತ್ತು ಯುಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯಥಿಗಳ ಮೇಲಿನ ವಯೋಮಿತಿ ಕಡಿಮೆಗೊಳಿಸುವಂತೆ ಯುಪಿಎಸ್ಸಿ ನೇಮಿತ ಸಮಿತಿಯೊಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಿದೆಯೆಂದು ತಿಳಿದು ಬಂದಿದೆ.
ಶಿಕ್ಷಣ ಇಲಾಖೆಯ ಮಾಜಿ ಕಾರ್ಯದರ್ಶಿ ಬಿ ಎಸ್ ಬಾಸ್ವಾನ್ ಅವರು ಮುಖ್ಯಸ್ಥರಾಗಿರುವ ಸಮಿತಿಯನ್ನು ಮೋದಿ ಸರಕಾರ ಕಳೆದ ಆಗಸ್ಟ್ ತಿಂಗಳಲ್ಲಿ ನೇಮಿಸಿತ್ತು.
ಹಿಂದಿನ ಮನಮೋಹನ್ ಸಿಂಗ್ ಸರಕಾರ ಆರಂಭಿಸಿದ ಸಿವಿಲ್ ಸರ್ವಿಸ್ ಆ್ಯಪ್ಟಿಟ್ಯೂಡ್ ಪರೀಕ್ಷೆಯನ್ನು 2015ರಲ್ಲಿ ವಿರೋಧಿಸಿ ಹಲವಾರು ಪ್ರತಿಭಟನೆಗಳು ನಡೆದ ನಂತರ ಮೋದಿ ಸರಕಾರ ಪರೀಕ್ಷಾ ಪದ್ಧತಿಯನ್ನು ಪುನರ್ ಪರಿಶೀಲಿಸಲು ಒಪ್ಪಿಕೊಂಡಿತ್ತು.
ಪ್ರವೇಶಾತಿ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 1960 ದಶಕದಲ್ಲಿ 24 ವರ್ಷಗಳಿಂದ 2014ರಲ್ಲಿ32 ವರ್ಷಕ್ಕೆ ಏರಿತ್ತು.
ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ವಯೋಮಿತಿಯಲ್ಲಿ ಇನ್ನೂ ಐದು ವರ್ಷಗಳ ಸಡಿಲಿಕೆ ನೀಡಲಾಗಿದ್ದರೆ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹಾಗೂ ವಿಭಿನ್ನ ಸಾಮರ್ಥ್ಯದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಕ್ರಮವಾಗಿ ಇನ್ನೂ ಮೂರು ವರ್ಷಗಳ ಹಾಗೂ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
2012 ಹಾಗೂ 2013ರ ಪರೀಕ್ಷೆಗಳಲ್ಲಿ 30 ವರ್ಷ ದಾಟಿದ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ 6ರಿಂದ 11 ಶೇ ಆಗಿದೆ.
ಪರೀಕ್ಷಾ ಪದ್ಧತಿಯಲ್ಲಿ ಯಾವುದೇ ಅಮೂಲಾಗ್ರ ಬದಲಾವಣೆ ತರಬೇಕಿದ್ದರೂ ಮೊದಲು ಅಭ್ಯರ್ಥಿಗಳ ಪ್ರವೇಶಾತಿ ವಯಸ್ಸನ್ನು ಕಡಿಮೆಗೊಳಿಸುವುದರಿಂದ ಆರಂಭಿಸಬೇಕೆಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಒಟ್ಟು 4.6 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ ಅವರಲ್ಲಿ ಕೇವಲ 400 ಮಂದಿ ಯಶಸ್ಸು ಪಡೆದಿದ್ದಾರೆ.







