ಉಳ್ಳಾಲ: ಪ್ರಜ್ಞಾಹೀನ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದ ಯುವಕ ಮೃತ್ಯು
ಕೊಲೆ ಪ್ರಕರಣ ದಾಖಲು
ಉಳ್ಳಾಲ, ಮೇ 23: ತೊಕ್ಕೊಟ್ಟು ಸಮೀಪದ ರೈಲ್ವೆ ಹಳಿಯ ಬದಿಯಲ್ಲಿ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಯಲ್ಲಿ ಆತ ಮೃತಪಟ್ಟ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಯುವಕ ಮೃತಪಟ್ಟಿರಬಹುದು ಎಂದು ಪೊಲೀಸರು ಸಂಶಯಿಸಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೊಲ್ಯ ಕನೀರುತೋಟ ನಿವಾಸಿ ನಿತೇಶ್ (34) ಮೃತಪಟ್ಟ ಯುವಕ.
ರವಿವಾರ ಮಧ್ಯಾಹ್ನ ತೊಕ್ಕೊಟ್ಟಿನ ಶಿವಾಜಿ ಫ್ರೆಂಡ್ಸ್ ಕ್ಲಬ್‌ನ ಹಿಂದುಗಡೆ ಇರುವ ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನಿತೇಶ್ ಪತ್ತೆಯಾಗಿದ್ದರು. ಯಾರೋ ಯುವಕ ರೈಲು ಢಿಕ್ಕಿಯಾಗಿ ಬಿದ್ದಿದ್ದಾನೆ ಎಂದು ಗ್ರಹಿಸಿದ್ದ ಕ್ಲಬ್ ಸದಸ್ಯರು ಯುವಕನನ್ನು 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿತೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿತೇಶ್ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಏರುಧ್ವನಿಯಿಂದ ಅವಿನಾಶ್, ದಿನೇಶ್, ಉಮೇಶ್ ಎಂಬ ಮೂವರ ಹೆಸರನ್ನು ಹೇಳಿರುವುದಾಗಿ ನಿತೇಶ್‌ರ ಸಹೋದರಿ ನೀತಾ ಶೆಟ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿತೇಶ್ ಸೇರಿದಂತೆ ನಾಲ್ಕು ಮಂದಿ ಕ್ಲಬ್‌ನ ಹತ್ತಿರವೇ ಸುತ್ತಾಡುತ್ತಿದ್ದು, ಯಾವುದೋ ವಿಷಯದಲ್ಲಿ ತಕರಾರು ಶುರುವಾಗಿ ಹೊಡೆದಾಡಿ ಅಥವಾ ಚಲಿಸುವ ರೈಲಿನತ್ತ ದೂಡಿ ಕೊಲೆಗೈಯಲು ಯತ್ನಿಸಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.







