ಕಾಂಗ್ರೆಸ್, ಬಿಜೆಪಿ ಸಂಬಂಧ ಗಂಡ ಹೆಂಡಿರಂತೆ, ಜನರನ್ನು ಮೂರ್ಖರನ್ನಾಗಿಸಲಾಗಿದೆ: ಕೇಜ್ರಿವಾಲ್

ಹೊಸದಿಲ್ಲಿ, ಮೇ23: ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಟು ಟೀಕಾಪ್ರಹಾರ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವೆರಡೂ ಪತಿಪತ್ನಿಯರಿದ್ದಂತೆ ಪರಸ್ಪರ ಸಂಬಂಧ ಹೊಂದಿವೆ ಹಾಗೂ ಜನರನ್ನು ಮೂರ್ಖರನ್ನಾಗಿ ಮಾಡುತ್ತಿವೆ ಎಂದು ಗುಡುಗಿದ್ದಾರೆ. ಪಣಜಿಯಲ್ಲಿ ಇಂದು ಆಮ್‌ಆದ್ಮಿ ಪಾರ್ಟಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಿದ್ದ ಅವರು" ನನಗೆ ಅವೆರಡರೊಳಗೆ ಪತಿಪತ್ನಿಯರಿಗಿರುವಂತೆ ನಿಕಟ ಸಂಬಂಧವಿದೆ ಎಂದು ಅನಿಸುತ್ತಿದೆ. ಮಿಸ್ಟರ್ ಆ್ಯಂಡ್ ಮಿಸೆಸ್ ಬಿಜೆಪಿ-ಕಾಂಗ್ರೆಸ್. ಅವರು ಮನೆಯಲ್ಲಿ ಗಲಾಟೆಮಾಡುವ ಪತಿ ಪತ್ನಿಯರಂತೆ. ಅವರಿಬ್ಬರೂ ಪರಸ್ಪರರ ರಹಸ್ಯ ಅರಿತಿದ್ದಾರೆ" ಎಂದು ಹೇಳಿದ್ದಾರೆ.
ಅವರು ಪಣಜಿಯಲ್ಲಿ ಮುಂದಿನವರ್ಷ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಅಭಿಯಾನವನ್ನು ಆರಂಭಿಸಿದ್ದಾರೆ. ಆಪ್‌ನ ರಾಷ್ಟ್ರೀಯ ಸಂಯೋಜಕರಾಗಿರುವ ಕೇಜ್ರಿವಾಲ್ " ಬಿಜೆಪಿ ಕಾಂಗ್ರೆಸ್‌ನ ರಹಸ್ಯವನ್ನು ಅರಿತಿದೆ. ತನಗೆ ಯಾರೊ ಒಬ್ಬರು ಮನೋಹರ್ ಪಾರಿಕ್ಕರ್‌ರ ಬಳಿ ಕಾಂಗ್ರೆಸ್ ನಾಯಕರ ಹಲವು ಫೈಲುಗಳಿದ್ದವು ಆದರೂ ಅವರು ಕಾಂಗ್ರೆಸ್‌ನ ಈ ನಾಯಕರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಫೈಲನ್ನಿಟ್ಟು ಕಾಂಗ್ರೆಸ್‌ನ್ನು ಅವರು ಬ್ಲಾಕ್‌ಮೈಲ್ ಮಾಡುತ್ತಿರಬಹುದು" ಎಂದು ಹೇಳಿದ್ದಾರೆ.
"ಎರಡೂ ಪಕ್ಷಗಳೊಳಗೆ ಉತ್ತಮ ಸಂಬಂಧವಿದೆ. ಜನರನ್ನು ಮಾತ್ರ ಮೂರ್ಖರನ್ನಾಗಿ ಮಾಡಲಾಗುತ್ತಿದೆ. "ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಜನರನ್ನು ಲೂಟಿಮಾಡಿವೆ. ಎರಡೂ ಪಕ್ಷಗಳು ಮಾಫಿಯಾ ಆಗಿವೆ. ಅವು ಮಾಫಿಯಾ ಆಡಳಿತ ನಡೆಸುತ್ತಿವೆ" ಎಂದು ಆರೋಪಿಸಿದ್ದ ಕೇಜ್ರಿವಾಲ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೇಶದಲ್ಲಿ ಐದೈದು ವರ್ಷಗಳವರೆಗೆ ಸರಕಾರ ನಡೆಸುವ ಅಲಿಖಿತ ಒಪ್ಪಂದವಾಗಿದೆ ಎಂದೂ ಹೇಳಿದ್ದಾರೆ. ಟಿಕೆಟ್ ಗಳಿಸಲಿಕ್ಕಾಗಿ ಆಮ್ ಆದ್ಮಿ ಪಾರ್ಟಿ ಸೇರುವವರಿಗೆ ಪಾರ್ಟಿಯಲ್ಲಿ ಯಾವುದೇ ಪ್ರಾಶಸ್ತ್ಯವಿಲ್ಲ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ ಎಂದು ವರದಿಯಾಗಿದೆ.







