ಮುಚ್ಚಲ್ಪಟ್ಟಿದ್ದ ಬೆಟ್ಟಂಪಾಡಿ ಪಾರ ಸರಕಾರಿ ಶಾಲೆಯನ್ನು ಪುನರಾರಂಭಿಸಲು ಸಿದ್ದತೆ
ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ: ದಾಖಲಾತಿ ಆಂದೋಲನ ನಡೆಸಲು ತೀರ್ಮಾನ

ಪುತ್ತೂರು, ಮೇ 23: ಮಕ್ಕಳ ಕೊರತೆಯಿಂದಾಗಿ ಕಳೆದ ಒಂದು ವರ್ಷದಿಂದ ಮುಚ್ಚಲ್ಪಟ್ಟಿದ್ದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪಾರ ಸರಕಾರಿ ಪ್ರಾಥಮಿಕ ಶಾಲೆಯನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಶಾಲೆಗೆ ಭೇಟಿ ನೀಡಿ ಸ್ಥಳೀಯರ ಜೊತೆಗೆ ಚರ್ಚಿಸಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಯನ್ನು ಪುನರಾರಂಭಿಸುವ ಬಗ್ಗೆ ಸಹಕಾರ ಕೇಳಿದ್ದಾರೆ.ಸ್ಥಳೀಯರಿಂದ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಮೂಲಭೂತ ಸೌಕರ್ಯವಿದ್ದರೂ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದ ಶಾಲೆ:
ಗ್ರಾಮೀಣ ಪ್ರದೇಶದಲ್ಲಿರುವ ಪಾರ ಶಾಲೆಯಲ್ಲಿ ಶಾಲಾ ಕಟ್ಟಡ, ಶೌಚಾಲಯ, ಕುಟೀರ, ಸುಸಜ್ಜಿತ ರಂಗ ಮಂಟಪ ಎಲ್ಲವೂ ಇದೆ. ಆದರೆ ಇಲ್ಲಿ ಮಕ್ಕಳ ಕೊರತೆಯಿಂದಾಗಿ ಶಾಲೆಯನ್ನು ಮುಚ್ಚಲಾಗಿತ್ತು. ಕೆಲವು ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ. ಮಾತ್ರವಲ್ಲದೇ ಖಾಸಗಿ ಶಾಲೆಗಳ, ಇಂಗ್ಲೀಷ್ ಮಾಧ್ಯಮದ ವ್ಯಾಮೋಹ ಮತ್ತು ಮನೆ ಬಾಗಿಲಿಗೆ ಬರುವ ಖಾಸಗಿ ಶಾಲಾ ಬಸ್ಸುಗಳಿಗೆ ಮಾರು ಹೋಗಿರುವ ಪೋಷಕರು ತಮ್ಮ ಮಕ್ಕಳನ್ನು ಇತರ ಶಾಲೆಗಳಿಗೆ ಸೇರಿಸಿಕೊಂಡಿದ್ದಾರೆ.
ಮತ್ತೆ ತೆರೆಯಲು ಪೂರ್ವಭಾವಿ ಸಭೆ
ಶಾಲೆಯನ್ನು ಪುನರಾರಂಭಿಸುವ ಕುರಿತು ಪಾರ ಶಾಲೆಯಲ್ಲಿ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸ್ಥಳೀಯರು ಭಾಗವಹಿಸಿ ಶಾಲೆಯನ್ನು ಮತ್ತೆ ತೆರೆಯಲು ತಮ್ಮ ಸಹಕಾರವನ್ನು ತಿಳಿಸಿದರು.
ಸ್ಥಳೀಯರ ಸಹಕಾರದಿಂದ ಮಾತ್ರ ಶಾಲೆ ಉಳಿಯಲು ಸಾಧ್ಯ ಎಂಬುದನ್ನು ಅವರಿಗೆ ಮನದಟ್ಟು ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್, ಶಾಲೆ ಪ್ರಾರಂಭಿಸಬೇಕಾದರೆ ಕನಿಷ್ಠ 5 ಮಕ್ಕಳ ಸಂಖ್ಯೆ ಕಡ್ಡಾಯವಾಗಿದ್ದು, ಈಗಾಗಲೇ ಕೇವಲ ನಾಲ್ಕು ಮಕ್ಕಳು ಮಾತ್ರ ದಾಖಲೀಕರಣಗೊಂಡಿದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಲು ಪ್ರಯತ್ನ ಮಾಡಿ ನಮ್ಮ ಶಿಕ್ಷಣ ಇಲಾಖೆಯಿಂದ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಶಾಲೆಗೆ ಮಕ್ಕಳನ್ನು ದಾಖಲಿಸುವ ಉದ್ದೇಶದಿಂದ ಮೇ 24ರಂದು ಮನೆ ಮನೆಗೆ ಭೇಟಿ ನೀಡಿ ಮನೆಯವರ ಮನವೊಲಿಸುವ ‘ವಿಶೇಷ ದಾಖಲಾತಿ ಆಂದೋಲನ’ಕ್ಕೆ ಹಾಗೂ ಹೆತ್ತವರ ಸಭೆ ನಡೆಸಲು ಇದೀಗ ಸಿದ್ಧತೆ ನಡೆಸಲಾಗಿದೆ.







