ದ್ವಿಚಕ್ರ ವಾಹನ ಢಿಕ್ಕಿಯಾದ ವಿಚಾರದಲ್ಲಿ ಹಲ್ಲೆ: ಇಬ್ಬರಿಗೆ ಗಾಯ

ಬೆಳ್ತಂಗಡಿ, ಮೇ 23: ದ್ವಿಚಕ್ರ ವಾಹನಗಳು ಢಿಕ್ಕಿಯಾದ ವಿಚಾರದಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆ ತಂಡವೊಂದು ಇಬ್ಬರಿಗೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ತೆಂಕಕಾರಂದೂರಿನ ಅಶೋಕ್ ಆಚಾರ್ಯ (38) ಹಾಗೂ ಚಂದ್ರಹಾಸ ದಾಸ್(40) ಹಲ್ಲೆಗೊಳಗಾದವರು.
ಅಶೋಕ್ ಗುರುವಾಯನಕೆರೆಯಿಂದ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಶಕ್ತಿನಗರ ಎಂಬಲ್ಲಿ ಎದುರಿನಿಂದ ಸುಲೈಮಾನ್ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಢಿಕ್ಕಿಯಾಗಿದೆ. ಈ ಬಗ್ಗೆ ಇಬ್ಬರಲ್ಲೇ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಅಬ್ದುರ್ರಝಾಕ್ ಯಾನೆ ದದ್ದು ಮತ್ತಿತರರು ಸ್ಥಳಕ್ಕೆ ಬಂದು ಅಶೋಕ್‌ರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು.
ಈ ಸಂದರ್ಭ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಚಂದ್ರಹಾಸ ಎಂಬುವರು ಗಲಾಟೆಯನ್ನು ಗಮನಿಸಿ ತಡೆಯಲು ಬಂದಿದ್ದು, ಅಬ್ದುರ್ರಜಾಕ್, ನಝೀರ್, ಹಸೈನಾರ್, ರಝಾಕ್ ಮತ್ತು 20 ಮಂದಿಯ ತಂಡ ಅಶೋಕ್ ಮತ್ತು ಚಂದ್ರಹಾಸರಿಗೆ ಹೆಲ್ಮೆಟ್ ಹಾಗೂ ಕೈಗಳಿಂದ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಗಾಯಗೊಂಡ ಅಶೋಕ್ ಹಾಗೂ ಚಂದ್ರಹಾಸರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







