ಚಬಹಾರ್ ಬಂದರು ಅಭಿವೃದ್ಧಿ ಸಹಿತ 12 ಒಪ್ಪಂದಗಳಿಗೆ ಭಾರತ-ಇರಾನ್ ಅಂಕಿತ

►ಇರಾನ್‌ಗೆ ಭಾರತದಿಂದ 150 ಮಿ.ಡಾ.ಸಾಲ
►ಚಬಹಾರ್-ಝಹೆದಾನ್ ರೈಲು ಮಾರ್ಗ ನಿರ್ಮಾಣ
►ಚಬಹಾರ್‌ನಲ್ಲಿ ನ್ಯಾಲ್ಕೋದಿಂದ ಅಲ್ಯುಮಿನಿಯಂ ಘಟಕ
ಟೆಹರಾನ್,ಮೇ 23: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದು, ವ್ಯೆಹಾತ್ಮಕ ಚಬಹಾರ್ ಬಂದರಿನ ಅಭಿವೃದ್ಧಿ ಸೇರಿದಂತೆ ಹನ್ನೆರಡು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಅಲ್ಯುಮಿನಿಯಂ ಕಾರ್ಖಾನೆಯೊಂದರ ಸ್ಥಾಪನೆ ಹಾಗೂ ಭಾರತಕ್ಕೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣವೂ ಈ ಒಪ್ಪಂದಗಳಲ್ಲಿ ಸೇರಿವೆ.
ಮೋದಿಯವರ ಇರಾನ್ ಭೇಟಿ ಸಂದರ್ಭದಲ್ಲಿ ಅಂಕಿತ ಹಾಕಲಾಗಿರುವ ಈ ಹನ್ನೆರಡು ಒಪ್ಪಂದಗಳು ಮತ್ತು ಒಡಂಬಡಿಕೆಗಳು ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲಿವೆ. ಮೋದಿ ಅಟಲ್ ಬಿಹಾರಿ ವಾಜಪೇಯಿಯವರ ಬಳಿಕ 15 ವರ್ಷಗಳಲ್ಲಿ ಇರಾನ್‌ಗೆ ಭೇಟಿ ನೀಡಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆರ್ಥಿಕತೆ,ವ್ಯಾಪಾರ,ಸರಕು ಸಾಗಾಣಿಕೆ,ಬಂದರು ಅಭಿವೃದ್ಧಿ,ಸಂಸ್ಕೃತಿ,ವಿಜ್ಞಾನ ಮತ್ತು ಶೈಕ್ಷಣಿಕ ಸಹಕಾರ ಕ್ಷೇತ್ರಗಳಲ್ಲಿ ಈ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಪೈಕಿ ಭಾರತದ ಜಂಟಿ ಪ್ರವರ್ತನೆಯಲ್ಲಿ ಇರಾನಿನ ದಕ್ಷಿಣ ಕರಾವಳಿಯಲ್ಲಿರುವ ಚಬಹಾರ್ ಬಂದರಿನ ಮೊದಲ ಹಂತದ ಅಭಿವೃದ್ಧಿಗೆ ಗುತ್ತಿಗೆಯು ಪ್ರಮುಖ ಒಪ್ಪಂದವಾಗಿದೆ. ಇದೇ ವೇಳೆ ಇರಾನ್‌ಗೆ 150 ಮಿಲಿಯನ್ ಡಾಲರ್‌ಗಳ ಸಾಲವನ್ನು ನೀಡಲು ಭಾರತವು ಒಪ್ಪಿಕೊಂಡಿದ್ದು, ಈ ಸಂಬಂಧ ಒಪ್ಪಂದಕ್ಕೆ ಭಾರತದ ಎಕ್ಸಿಂ ಬ್ಯಾಂಕು ಸಹಿ ಹಾಕಿತು.
ಚಬಹಾರ್ ಬಂದರಿನಿಂದ ಝಹೆದಾನ್‌ಗೆ ರೈಲ್ವೆ ಮಾರ್ಗ ನಿರ್ಮಾಣದ ಒಪ್ಪಂದಕ್ಕೆ ಇರ್ಕಾನ್ ಸಹಿ ಮಾಡಿದರೆ ಇರಾನ್ ಅಗ್ಗದ ದರದಲ್ಲಿ ನೈಸರ್ಗಿಕ ಅನಿಲವನ್ನು ಒದಗಿಸುವುದಾದರೆ ಚಬಹಾರ್ ಮುಕ್ತ ವ್ಯಾಪಾರ ವಲಯದಲ್ಲಿ 0.5 ಮಿ.ಟನ್ ಸಾಮರ್ಥ್ಯದ ಅಲ್ಯುಮಿನಿಯಂ ಸ್ಮೆಲ್ಟರ್ ಘಟಕವನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವ ಒಡಂಬಡಿಕೆಗೆ ಸರಕಾರಿ ಸ್ವಾಮ್ಯದ ನ್ಯಾಲ್ಕೋ ಅಂಕಿತವನ್ನು ಹಾಕಿತು.
ಇರಾನಿನ ರಫ್ತು ಖಾತರಿ ನಿಧಿ ಮತ್ತು ಭಾರತೀಯ ರಫ್ತು ಖಾತರಿ ನಿಗಮದ ನಡುವೆ ಒಡಂಬಡಿಕೆಯೊಂದಕ್ಕೂ ಇದೇ ವೇಳೆ ಅಂಕಿತ ಬಿದ್ದಿತು. ನೀತಿ ನಿರೂಪಣೆ ಕುರಿತು ಮಾತುಕತೆ ಮತ್ತು ಚಿಂತನ ಚಿಲುಮೆಗಳ ನಡುವೆ ಸಂವಾದಕ್ಕಾಗಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯಗಳು ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದವು. ಇನ್ನೊಂದು ಒಡಂಬಡಿಕೆ ಇರಾನಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸ್ಕೂಲ್ ಫಾರ್ ಇಂಟರ್‌ನ್ಯಾಷನಲ್ ರಿಲೇಷನ್ಸ್ ಮತ್ತು ಭಾರತದ ಫಾರಿನ್ ಸರ್ವಿಸ್ ಇನ್‌ಸ್ಟಿಟ್ಯೂಟ್ ನಡುವೆ ಮೂಡಿಬಂದಿದೆ.
ಉಭಯ ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ನಡುವೆ ಕಾರ್ಯಕಾರಿ ಶಿಷ್ಟಾಚಾರ ಕುರಿತು ಮತ್ತು ನ್ಯಾಷನಲ್ ಆರ್ಕಿವ್ಸ್ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಲೈಬ್ರರಿ ಆಫ್ ಇರಾನ್ ನಡುವೆ ಒಡಂಬಡಿಕೆಗಳಿಗೂ ಉಭಯ ರಾಷ್ಟ್ರಗಳು ಸಹಿ ಮಾಡಿದವು. ಸಾಂಸ್ಕೃತಿಕ ಸಹಕಾರಕ್ಕಾಗಿ ಸಂಸ್ಕೃತಿ ಸಚಿವಾಲಯ ಮತ್ತು ಇರಾನಿನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯಗಳ ನಡುವೆ ಹಾಗೂ ಇರಾನಿನ ಸಂಸ್ಕೃತಿ ಮತ್ತು ಸಂಬಂಧಗಳ ಸಂಸ್ಥೆ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ನಡುವೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.







