ಪೋಪ್ - ಅಲ್ ಅಝರ್ ಇಮಾಮ್ ಆತ್ಮೀಯ ಭೇಟಿ

ವ್ಯಾಟಿಕನ್ ಸಿಟಿ , ಮೇ 23 : ಮಹತ್ವದ ಬೆಳವಣಿಗೆಯೊಂದರಲ್ಲಿ ಪೋಪ್ ಫ್ರಾನ್ಸಿಸ್ ಹಾಗು ಈಜಿಪ್ಟ್ ನ ಪ್ರತಿಷ್ಠಿತ ಸುನ್ನಿ ಮುಸ್ಲಿಂ ಮಸೀದಿ ಅಲ್ ಅಝರ್ ನ ಪ್ರಧಾನ ಧರ್ಮಗುರು ಭೇಟಿಯಾಗಿ ಮಾತುಕತೆ ನಡೆಸಿ ಪರಸ್ಪರ ಆಲಿಂಗನದ ಆತ್ಮೀಯತೆ ಪ್ರದರ್ಶಿಸಿದ್ದಾರೆ. ಇದರೊಂದಿಗೆ ಕ್ಯಾಥೊಲಿಕ್ - ಅಲ್ ಅಝರ್ ಸಂಬಂಧದ ಮೇಲಿನ ಐದು ವರ್ಷಗಳ ನಿರ್ಬಂಧ ಮುಗಿದ ಸೂಚನೆ ನೀಡಿದ್ದಾರೆ.
ಇಲ್ಲಿನ ತಮ್ಮ ಅಧಿಕೃತ ನಿವಾಸಕ್ಕೆ ಆಗಮಿಸಿದ ಶೇಖ್ ಅಹ್ಮದ್ ಅಲ್ ತಯ್ಯಿಬ್ ಅವರೊಂದಿಗೆ ಪೋಪ್ ತಮ್ಮ ಖಾಸಗಿ ಗ್ರಂಥಾಲಯದಲ್ಲಿ 25 ನಿಮಿಷ ಮಾತುಕತೆ ನಡೆಸಿದರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಇಬ್ಬರು ವಿದಾಯ ಹೇಳಿದರು. " ಈ ಭೇಟಿಯೇ ಸಂದೇಶ " ಎಂದು ಪೋಪ್ ಈ ಸಂದರ್ಭದಲ್ಲಿ ಹೇಳಿದರು.
ಬಳಿಕ ಅಲ್ ತಯ್ಯಿಬ್ ನೇತೃತ್ವದ ನಿಯೋಗ ಅಂತರ್ಧರ್ಮೀಯ ಮಾತುಕತೆಯ ಉಸ್ತುವಾರಿ ಹೊತ್ತ ವ್ಯಾಟಿಕನ್ ಕಾರ್ಡಿನಲ್ ಜೊತೆ ಮಾತುಕತೆ ನಡೆಸಿದರು.
ಅಂದಿನ ಪೋಪ್ ಹದಿನಾರನೇ ಬೆನೆಡಿಕ್ಟ್ ಅವರ ಹೇಳಿಕೆಯೊಂದನ್ನು ಪ್ರತಿಭಟಿಸಿ ಕೈರೋದ ಅಲ್ ಅಝರ್ ವ್ಯಾಟಿಕನ್ ಜೊತೆಗಿನ ಮಾತುಕತೆಯನ್ನು ಸ್ಥಗಿತಗೊಳಿಸಿದ ಐದು ವರ್ಷಗಳ ಬಳಿಕ ಈ ಭೇಟಿ ನಡೆದಿದೆ.
ಅಲೆಕ್ಸಾಂಡ್ರಿಯದಲ್ಲಿ ಹೊಸವರ್ಷದಂದು ಚರ್ಚೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 21 ಮಂದಿ ಮೃತಪಟ್ಟ ಬಳಿಕ ಕ್ರೈಸ್ತರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಅಂದಿನ ಪೋಪ್ ಹದಿನಾರನೇ ಬೆನೆಡಿಕ್ಟ್ ಆಗ್ರಹಿಸಿದ್ದರು. ಆ ಬಳಿಕ ಕ್ರೈಸ್ತರ ಮೇಲಿನ ದಾಳಿಗಳ ಸಂಖ್ಯೆ ಹೆಚ್ಚಿದೆ. ಆದರೆ ವ್ಯಾಟಿಕನ್ ಹಾಗು ಅಲ್ ಅಝರ್ ಮತ್ತೆ ಮಾತುಕತೆ ಪ್ರಾರಂಭಿಸಿವೆ. ಕಳೆದ ಫೆಬ್ರವರಿಯಲ್ಲಿ ವ್ಯಾಟಿಕನ್ ನಿಯೋಗವೊಂದು ಕೈರೊಗೆ ಭೇಟಿ ನೀಡಿ ಅಲ್ ತಯ್ಯಿಬ್ ಅವರನ್ನು ವ್ಯಾಟಿಕನ್ ಭೇಟಿಗೆ ಆಹ್ವಾನಿಸಿತ್ತು.
ತಮ್ಮ ಭೇಟಿಯ ಬಳಿಕ ಪೋಪ್ ಅವರು ಅಲ್ ತಯ್ಯಿಬ್ ಅವರಿಗೆ ತಮ್ಮ ಪರಿಸರ ಸುತ್ತೋಲೆಯ ಪ್ರತಿಯೊಂದನ್ನು ಹಾಗು ಶಾಂತಿ ಪದಕವನ್ನು ಪ್ರದಾನಿಸಿದರು. ಬಳಿಕ ಪ್ಯಾರಿಸ್ ನಲ್ಲಿ ನಡೆಯುವ ಪೂರ್ವ - ಪಶ್ಚಿಮ ಸಂಬಂಧಗಳ ಕುರಿತು ಮುಸ್ಲಿಂ - ಕ್ಯಾಥೊಲಿಕ್ ಸಮಾವೇಶ ಉದ್ಘಾಟಿಸಲು ಪ್ಯಾರಿಸ್ ಗೆ ತೆರಳಿದರು.












