ಶ್ವಾನ ಸಂತಾನ ಹರಣ ಶಸ್ತ್ರ ಚಿಕಿತ್ಸೆ
ಶಿಬಿರಕ್ಕೆ ಚಾಲನೆ ಮಡಿಕೇರಿಯಲ್ಲಿ 40 ಕ್ಕೂ ಹೆಚ್ಚು ಶ್ವಾನಗಳಿಗೆ ಶಸ್ತ್ರ ಚಿಕಿತ್ಸೆ

ಮಡಿಕೇರಿ, ಮೇ 23: ನಿಮಲ್ ರಿಲೀಫ್ ಕೊಡಗು ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಕೂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶ್ವಾನಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರ ನಡೆಸುತ್ತಿದೆ. ಜಿಲ್ಲೆಯ ವಿವಿಧೆಡೆ ಐದು ದಿನಗಳ ಕಾಲ ನಡೆಯಲಿರುವ ಶ್ವಾನ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಮಡಿಕೇರಿಯಲ್ಲಿ ಚಾಲನೆ ದೊರೆಯಿತು.
ಮೇ 23ರಿಂದ 25ರವರೆಗೆ ಮೂರು ದಿನಗಳ ಕಾಲ ನಗರದ ಮೈಸೂರು ರಸ್ತೆಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಗರಸಭೆಯ ಸಹಕಾರದೊಂದಿಗೆ ಶಿಬಿರ ನಡೆಯುತ್ತಿದೆ. ಮೊದಲ ದಿನ ನಗರದ ಸುಮಾರು 40ಕ್ಕೂ ಹೆಚ್ಚು ಬೀದಿ ಶ್ವಾನ ಹಾಗೂ ಸಾಕು ಶ್ವಾನಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಮೇ 26ರಂದು ಚೆಟ್ಟಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುವ ಶಿಬಿರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಲಿದ್ದಾರೆ. ಮೇ 27ರಂದು ಸುಂಟಿಕೊಪ್ಪದ ಸರಕಾರಿ ಪಶುಪಾಲನಾ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ. ಶಿಬಿರ ನಡೆಯುವ ಪ್ರತಿದಿನ ಬೆಳಗ್ಗೆ 9ಗಂಟೆಯಿಂದ 4ಗಂಟೆಯವರೆಗೆ ಬೀದಿ ನಾಯಿ ಮತ್ತು ಸಾಕು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಸಾಕು ನಾಯಿಗಳಿಗೆ 1,500 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಲೈಲಾ ಆಳ್ವರಿಸ್ ತಿಳಿಸಿದರು.
ಸರ್ವೋದಯ ಸೇವಾ ಸಾಂಭವಿ ಸಂಸ್ಥೆಯ ತಂಡ ನಾಯಿಗಳನ್ನು ಸೆರೆಹಿಡಿಯಲು ಸಹಕಾರ ನೀಡುತ್ತಿದೆ. 12 ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಸುಮಾರು 300 ಶ್ವಾನಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಜಿಲ್ಲೆಯ ನಗರಸಭೆೆ, ಪಪಂ ಮತ್ತು ಗ್ರಾಪಂಗಳು ಈ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಆಯೋಜಕರು ಇದೇ ಸಂದರ್ಭ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸಿ.ಬಿ.ಚಂಗಪ್ಪ ಹಾಗೂ ಖಜಾಂಚಿ ಕಾವೇರಿ ಮುತ್ತಣ್ಣ ಈ ಸಂದರ್ಭ ಉಪಸ್ಥಿತರಿದ್ದರು.







