‘ಅಂಗನವಾಡಿಗಳಿಗೆ ಗುಣಮಟ್ಟದ ಆಹಾರಪೂರೈಕೆ ಮಾಡಿ’
ಮಹಿಳೆ, ಮಕ್ಕಳು, ಹಿರಿಯರ ಸಬಲೀಕರಣ ಸಭೆ

ಮಡಿಕೇರಿ, ಮೇ 23 : ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಅಪೌಷ್ಠಿಕತೆಗೆ ತುತ್ತಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಅಂಗನವಾಡಿಗಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ ಅವರು ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಅಂಗನವಾಡಿ ಮೂಲಕ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವುದರ ಜೊತೆಗೆ ಕ್ಷಿರಭಾಗ್ಯ ಯೋಜನೆಯಡಿ ಹಾಲು ವಿತರಿಸುತ್ತಿದೆ. ಇವುಗಳೆಲ್ಲವನ್ನೂ ಕಾಲ ಕಾಲಕ್ಕೆ ಸರಬರಾಜು ಮಾಡುವಂತೆ ಸೂಚನೆ ನೀಡಿದರು. ಹೊದ್ದೂರು ಬಳಿಯ ಪಾಲೆಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇಲ್ಲದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು ಆರು ವರ್ಷದೊಳಗಿನ 30 ಮಕ್ಕಳು ಇದ್ದಾರೆ ಎಂದ ಮೇಲೆ ಅಂಗನವಾಡಿ ಕೇಂದ್ರ ತೆರೆಯಲು ಏನು ತೊಂದರೆ ಎಂದು ಪ್ರಶ್ನಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಜಯರಾಮ್ ಅವರು, ಜಿಲ್ಲೆಯಲ್ಲಿ 848 ಅಂಗನವಾಡಿಗಳು ಮತ್ತು 23 ಮಿನಿ ಅಂಗನವಾಡಿಗಳಿದ್ದು, 702 ಸ್ವಂತ ಕಟ್ಟಡದಲ್ಲಿ, 66 ಬಾಡಿಗೆ ಕಟ್ಟಡ, 15 ಶಾಲಾ ಕಟ್ಟಡ, 12 ಪಂಚಾಯತ್ ಕಟ್ಟಡದಲ್ಲಿ, 75 ಇತರೆ ಸ್ಥಳಗಳಲ್ಲಿ ಅಂಗನಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆೆ ಎಂದು ಅವರು ಮಾಹಿತಿ ನೀಡಿದರು. ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ಅಂಗನವಾಡಿ ಮೇಲ್ವಿಚಾರಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾದರೆ ಸರಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದನ್ನು ಅಂಗನವಾಡಿ ಮೇಲ್ವಿಚಾರಕರು ಸವಾಲಾಗಿ ಸ್ವೀಕರಿಸಿ ಎಂದು ಹೇಳಿದರು. ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಮರಣ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಶಿಶು ಮತ್ತು ತಾಯಿ ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕಿದೆ ಎಂದು ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್. ಅಧಿಕಾರಿ ಡಾ. ವಿ.ಪಾರ್ವತಿ ಅವರು, ಜಿಲ್ಲೆಯಲ್ಲಿ ಒಂದು ಸಾವಿರಕ್ಕೆ ಶೇ.14.8 ರಷ್ಟು ಶಿಶು ಮರಣವಾಗುತ್ತಿವೆೆ. ಶಿಶುವಿನ ತೂಕ ಕಡಿಮೆ, ಅವಧಿಗೂ ಮೊದಲು ಜನನ, ಹುಟ್ಟುವಾಗ ಹೃದಯದಲ್ಲಿ ತೊಂದರೆ, ಮೆದುಳು ಜ್ವರ ಶಿಶು ಮರಣಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಶೇ.98.5 ರಷ್ಟು ಆಸ್ಪತ್ರೆಯಲ್ಲಿ ಹೆರಿಗೆಯಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 71 ಮಂದಿ ಮನೆಯಲ್ಲಿ ಹೆರಿಗೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ಶಕುಂತಳಾ ಶೆಟ್ಟಿ ಅವರು ಮಕ್ಕಳ ಆರೋಗ್ಯ ಉತ್ತಮವಾಗಿದ್ದರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳು ಮತ್ತು ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ದೊಡ್ಡ ಸಾಧನೆಯಲ್ಲ. ತಪ್ಪು ಮಾಡದಂತೆ ಅರಿವು ಮೂಡಿಸುವುದು ಮುಖ್ಯ ಎಂದು ಶಕುಂತಳಾ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿಜಯ ಪ್ರಕಾಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರಾಜು, ಮಹಿಳೆಯರ ರಕ್ಷಣಾಧಿಕಾರಿ ಮುಮ್ತಾಝ್, ವಿಕಲಚೇತನರ ಅಧಿಕಾರಿ ಎನ್.ಎಂ.ಜಗದೀಶ್, ಸಿಡಿಪಿಒಗಳಾದ ದಮಯಂತಿ, ಶಾರದ, ಯಶೋದಾ, ಶಾರದಾ ರಾಮನ್ ಅವರು ತಮ್ಮ ವಿಭಾಗ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು. ಜಿಪಂ ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
n
ಸುಳ್ಳು ಮೊಕದ್ದಮೆ ಬೇಡ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಹಲವು ಕಾನೂನು ಕಾಯ್ದೆಗಳಿವೆ ಎಂದು ಹೇಳಿಕೊಂಡು ಪತಿ ಹಾಗೂ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಸಂಬಂಧ ಎಲ್ಲರೂ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ. ವರದಕ್ಷಿಣೆ, ದೌರ್ಜನ್ಯ ಹೆಸರು ಹೇಳಿಕೊಂಡು ಗಂಡನ ಕುಟುಂಬದವರ ಮೇಲೆ ಪೂರ್ವಗ್ರಹ ಪೀಡಿತರಾಗಿ ಪತಿ ಮನೆಯವರನ್ನು ನ್ಯಾಯಾಲಯಕ್ಕೆ ಅಲೆಸುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ವರದಕ್ಷಿಣೆ, ದೌರ್ಜನ್ಯವೆಸಗಿದ್ದಲ್ಲಿ ಪತಿಯ ವಿರುದ್ಧ ದೂರು ದಾಖಲಿಸಲಿ, ಅದನ್ನು ಬಿಟ್ಟು ಕುಟುಂಬದವರು ಹತ್ತಿರದಲ್ಲಿ ವಾಸ ಮಾಡದಿದ್ದರೂ, ಪತಿಯ ಕುಟುಂಬದವರ ಮೇಲೆ ದೂರು ದಾಖಲಿಸುವುದು ಹೆಚ್ಚಾಗುತ್ತಿದೆ ಎಂದು ಸಂಸದೀಯ ಕಾರ್ಯದರ್ಶಿ ಶಕುಂತಲಾ ಟಿ.ಶೆಟ್ಟಿ ಬೇಸರ ವ್ಯಕ್ತಪಡಿಸಿದರು.







