ಸಿರಿಯ: ಸರಣಿ ಬಾಂಬ್ ದಾಳಿಗೆ 101 ಬಲಿ

ಬೈರೂತ್,ಮೇ 23: ಯುದ್ಧಗ್ರಸ್ತ ಸಿರಿಯದಲ್ಲಿ ಸೋಮವಾರ ಸರಕಾರದ ನಿಯಂತ್ರಣದಲ್ಲಿರುವ ಎರಡು ನಗರಗಳಲ್ಲಿ ಸೋಮವಾರ ಐಸಿಸ್ ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿಗೆ ಕನಿಷ್ಠ 101 ಮಂದಿ ಬಲಿಯಾಗಿದ್ದಾರೆ.
ಜಬ್ಲೆಹ್ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 53 ಮಂದಿ ಸಾವನ್ನಪ್ಪಿದ್ದರೆ, ಇತರ 48 ಮಂದಿ ದಕ್ಷಿಣ ಸಿರಿಯದ ಟಾರ್ಟಸ್‌ನಲ್ಲಿ ಬಾಂಬ್ ದಾಳಿಗೆ ಅಹುತಿಯಾಗಿದ್ದಾರೆ. 2011ರ ಮಾರ್ಚ್‌ನಲ್ಲಿ ಸಿರಿಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ಈ ಎರಡು ನಗರಗಳಲ್ಲಿ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇವೆಂದು ಸಿರಿಯದ ಮಾನವಹಕ್ಕುಗಳ ಕುರಿತ ವೀಕ್ಷಣಾಸಂಸ್ಥೆ ಮುಖ್ಯಸ್ಥ ರಾಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗಿನ ವೇಳೆ ಜಬ್ಲೆಹ್ ಹಾಗೂ ಟಾರ್ಟಸ್ ನಗರಗಳಲ್ಲಿ ಏಕಕಾಲಕ್ಕೆ ಒಟ್ಟು ಏಳು ಬಾಂಬ್‌ಗಳು ಸ್ಫೋಟಿಸಿರುವುದಾಗಿ ವರದಿಗಳು ತಿಳಿಸಿವೆ.
ಟಾರ್ಟಸ್ ನಗರದ ಬಸ್‌ನಿಲ್ದಾಣವು ಐಸಿಸ್ ಉಗ್ರರ ಬಾಂಬ್ ದಾಳಿಗೆ ಗುರಿಯಾಗಿದ್ದು, ಅಲ್ಲಿ ಬಸ್‌ಗಳ ಅವಶೇಷಗಳು ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯವನ್ನು ಸ್ಥಳೀಯ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದೆ.
ಈ ಎರಡೂ ಬಾಂಬ್ ದಾಳಿಗಳ ಹೊಣೆಯನ್ನು ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಈ ಎರಡೂ ನಗರಳು ರಾಷ್ಟ್ರಾಧ್ಯಕ್ಷ ಬಶರ್ ಅಲ್ ಅಸದ್ ಅವರ ಭದ್ರಕೋಟೆಗಳಾಗಿದೆ. ಜಬ್ಲೆಹ್ ನಗರದಿಂದ ಕೇವಲ 25 ಕಿ.ಮೀ. ದೂರದಲ್ಲಿರುವ ಅಸದ್ ಕುಟುಂಬವು ಮೂಲತಃ ಕ್ವಾರ್ದಹಾ ಗ್ರಾಮದವರಾಗಿದ್ದಾರೆ.







