ಮೇ 26ರಂದು ಸಾಲ್ವಟೋರ್‌ನ ಮನವಿ ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಗೆ
ಇಟಲಿ ನಾವಿಕರ ಪ್ರಕರಣ
ಹೊಸದಿಲ್ಲಿ, ಮೇ 23: ಭಾರತೀಯ ಬೆಸ್ತರಿಬ್ಬರ ಹತ್ಯಾರೋಪಿ ಇಟಲಿಯ ನಾವಿಕ ಸಾಲ್ವಟೋರ್ ಗಿರೋನ್‌ನ ಮನವಿಯನ್ನು ಮೇ 26ರಂದು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಭಾರತ ಹಾಗೂ ಇಟಲಿಗಳ ನಡುವಿನ ನ್ಯಾಯಾಂಗ ವ್ಯಾಪ್ತಿಯ ಕುರಿತ ವಿವಾದವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣವು ನಿರ್ಧರಿಸುವವರೆಗೆ ಇಟಲಿಗೆ ಹೋಗಲು ಆತ ಅನುಮತಿ ಯಾಚಿಸಿದ್ದಾನೆ.
ಇನ್ನೊಬ್ಬ ಆರೋಪಿ ನಾವಿಕ ಮಿಸಿಮಿಲಿಯನೊ ಲಾಟೋರ್ ಆರೋಗ್ಯದ ನೆಲೆಯಲ್ಲಿ ಈಗಾಗಲೇ ಇಟಲಿಗೆ ಹೋಗಿದ್ದಾನೆ. ಆತನ ಇಟಲಿ ವಾಸವನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ಸೆ.30ರವರೆಗೆ ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಸಿ. ಪಂತ್ ಹಾಗೂ ಡಿ.ವೈ. ಚಂದ್ರಚೂಡರನ್ನೊಳಗೊಂಡ ರಜಾ ಕಾಲದ ಪೀಠವೊಂದು ಗಿರೋನ್‌ನ ಹೊಸ ಮನವಿಯನ್ನು ಗುರುವಾರ ಆಲಿಸಲಿದೆ. ಅದರಲ್ಲಾತ, ಪ್ರಕರಣದ ಸಂಬಂಧ ತನಗೆ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್‌ನ ಆದೇಶಕ್ಕೆ ತಿದ್ದುಪಡಿ ಬಯಸಿದ್ದಾನೆ.
ಪ್ರಕರಣದ ಸಂಬಂಧ ಇಬ್ಬರು ನಾವಿಕರ ವಿಚಾರಣೆ ನಡೆಸುವ ಹಕ್ಕಿನ ಕುರಿತು ಭಾರತ ಹಾಗೂ ಇಟಲಿಗಳು ತದ್ವಿರುದ್ಧ ಪ್ರತಿಪಾದನೆಗಳನ್ನು ಮಾಡುತ್ತಿವೆ.
ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕಲಾಪವು 2018ರ ಡಿಸೆಂಬರ್‌ನ ಒಳಗೆ ಮುಗಿಯುವುದೆಂದು ಕೇಂದ್ರ ಸರಕಾರ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.
ನ್ಯಾಯಾಲಯವು ಇಬ್ಬರು ನಾವಿಕರು ವಿಚಾರಣೆ ಸಹಿತ ಕ್ರಿಮಿನಲ್ ಪ್ರಕ್ರಿಯೆಗಳಿಗೆ ಈ ಮೊದಲೇ ತಡೆ ವಿಧಿಸಿದೆ.







