ಮಹಿಳೆಯರಿಗೆ ಸಚಿವ ಸ್ಥಾನ ನೀಡಿ: ಡಾ.ಕೆ.ಶರೀಫಾ
ಮೂರು ವರ್ಷಗಳ ಆಡಳಿತ-ಒಂದು ಸಂವಾದ ಕಾರ್ಯಕ್ರಮ
ಬೆಂಗಳೂರು, ಮೇ 23: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮೂರು ವರ್ಷದ ಆಡಳಿತ ಪೂರೈಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ಬೇಸರ ತಂದಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆಡಳಿತ ನೀಡುವಂತೆ ಸಾಹಿತಿ ಡಾ.ಕೆ.ಶರೀಫಾ ಮನವಿ ಮಾಡಿದ್ದಾರೆ.
ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಶೂದ್ರ ಶಕ್ತಿ ಸಮಿತಿ ಹಾಗೂ ಸೆಕ್ಯುಲರ್ ಸ್ಟೂಡೆಂಟ್ಸ್ ಯೂನಿಯನ್ ಆಯೋಜಿಸಿದ್ದ ‘ಮೂರು ವರ್ಷ ಆಡಳಿತ ನಡೆಸಿ ಪೂರೈಸಿರುವ ಕಾಂಗ್ರೆಸ್ ಸರಕಾರದ ಸಾಧನೆಗಳ ಬಗ್ಗೆ’ ಒಂದು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಜಾತಿ ಮತ್ತು ಧರ್ಮದ ವ್ಯಾಪ್ತಿಯನ್ನು ದಾಟಿ ಬರುವ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಬೇಕು. ಅಲ್ಲದೆ, ರಾಜ್ಯ ಸರಕಾರ ಹಸಿವು ಮುಕ್ತಗೊಳಿಸಲು ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಒಳ್ಳೆಯ ಯೋಜನೆ ಜಾರಿಗೆ ತಂದು ಉತ್ತಮ ಆಡಳಿತ ನೀಡಿದೆ. ಆದರೆ, ರಾಜಕೀಯ ಆಡಳಿತದಲ್ಲಿ ಮಹಿಳೆರಿಗೂ ಹೆಚ್ಚು ಸ್ಥಾನ ನೀಡುವ ಅಗತ್ಯವಿದೆ ಎಂದು ನುಡಿದರು.
ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತ ಕಾಲದಲ್ಲಿ ಬಡಪರ ಮತ್ತು ರೈತಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇಂತಹ ಜನಪ್ರಿಯ ಯೋಜನೆಗಳು ಬಡವರ್ಗಕ್ಕೆ ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಗೆ ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶೂದ್ರ ಶಕ್ತಿ ಸಮಿತಿ ಅಧ್ಯಕ್ಷ ಬಿ.ಆರ್.ರಾಮೇಗೌಡ, ಚಿಂತಕಿ ಡಾ.ಆರ್.ಕಮಲಮ್ಮ, ಪ್ರೊ.ಟಿ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಪ್ರೊ.ಮಾಲಿ ಮುದ್ದಣ್ಣ, ಹೇಮಂತ ಚಂದ್ರ ಮತ್ತಿತರರು ಹಾಜರಿದ್ದರು.
ಸ್ಮಾರ್ಟ್ ಸಿಟಿಗಳು ದೇಶಕ್ಕೆ ಆವಶ್ಯಕತೆಯಿಲ್ಲ, ಸ್ಮಾರ್ಟ್ ಹಳ್ಳಿಗಳು ಬೇಕಾಗಿದೆ. ಅಲ್ಲದೆ, ಮೊದಲು ಹಳ್ಳಿಗಾಡಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಸೂಕ್ತ ಪರಿಹಾರ ನೀಡುವ ಅಗತ್ಯವಿದೆ.
-ಕೃಷ್ಣ, ಮಾಜಿ ಸ್ಪೀಕರ್







