ಪೊಲೀಸ್ ಠಾಣೆಗಳಿಗೆ ಮರಣೋತ್ತರ ಪರೀಕ್ಷೆ ಕುರಿತ ಕೃತಿ ಕೊಡುಗೆ
ಉಡುಪಿ, ಮೇ 23: ಮಣಿಪಾಲ ಕೆಎಂಸಿಯ ನ್ಯಾಯ ವೈದ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ ಡಾ.ನಾಗೇಶ್ ಕುಮಾರ್ ರಾವ್ ತಾನು ಬರೆದ ‘ನ್ಯಾಯ ವೈದ್ಯ ಶಾಸ್ತ್ರ ಮರಣೋತ್ತರ ಶವ ಪರೀಕ್ಷೆ’ (ಮೆಡಿಕೋ ಲೀಗಲ್ ಪೋಸ್ಟ್ ಮೋರ್ಟಂ ಎಕ್ಸಾಮಿನೇಷನ್) ಕೃತಿಯನ್ನು ಕರ್ನಾಟಕ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೃತಿಯ ಲೇಖಕರು ಪ್ರಥಮ ಹಂತವಾಗಿ 300 ಕೃತಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈಗೆ ಇತ್ತೀಚೆಗೆ ಹಸ್ತಾಂತರಿಸಿದರು. ಈ ಸಂದರ್ಭ ರೇಣು ಜಯ ರಾಮ್, ಎ. ರಹ್ಮಾನ್, ವಿಜಯಕುಮಾರ್ ಉಪಸ್ಥಿತರಿದ್ದರು.
ಈ ಕೃತಿಯಲ್ಲಿ ಮರಣೋತ್ತರ ಶವ ಪರೀಕ್ಷೆಯ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಊಹೆ, ಕಲ್ಪನೆಗಳನ್ನು ಸ್ಪಷ್ಟೀಕರಿಸಲಾಗಿದ್ದು, ಸಾರ್ವಜನಿಕರು ಇದನ್ನು ಸುಲಭವಾಗಿ ಓದಿ ತಿಳಿದುಕೊಳ್ಳಬಹುದಾಗಿದೆ. ಸಾರ್ವಜನಿಕರ ವಲಯ ಹಾಗೂ ಪೊಲೀಸ್ ಇಲಾಖೆಗೆ ಇದೊಂದು ಆವಶ್ಯಕವಾದ ಕೃತಿಯಾಗಿದೆ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಠಾಣೆಗಳಿಗೆ ನೀಡಲು 100 ಕೃತಿಗಳನ್ನು ಇಲಾಖಾ ಅನುದಾನದಿಂದ ಖರೀದಿಸಲಾಗಿದೆ. ಲೇಖಕರು ನೀಡಿದ 300 ಕೃತಿಗಳನ್ನು ಪಶ್ಚಿಮ ವಲಯ ಕಚೇರಿಯ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯದ ಎಲ್ಲ ಠಾಣೆಗಳಿಗೆ ಕಳುಹಿಸುವ ಏರ್ಪಾಡು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.





