ಖಾಮಿನೈಗೆ 7 ಶತಮಾನದ ಖುರ್‌ಅನ್ ಹಸ್ತಪ್ರತಿಯ ಉಡುಗೊರೆ ನೀಡಿದ ಮೋದಿ

ಟೆಹ್ರಾನ್, ಮೇ 23: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇರಾನ್‌ನ ಸರ್ವೋಚ್ಛ ನಾಯಕ ಸಯ್ಯದ್ ಅಲಿ ಖಾಮಿನೈ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರಿಗೆ ಪವಿತ್ರ ಕುರಾನ್ ಗ್ರಂಥದ 7 ಶತಮಾನದ ಅಪೂರ್ವ ಹಸ್ತಪ್ರತಿಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ.ಕುಫಿಕ್ ಶೈಲಿಯ ಅಕ್ಷರವಿನ್ಯಾಸದಲ್ಲಿ ರಚಿತವಾದ ಈ ಹಸ್ತಪ್ರತಿಯನ್ನು, ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಉತ್ತರ ಪ್ರದೇಶದ ರಾಮ್‌ಪುರ್ ರಝಾ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಬಳಿಕ ಇರಾನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿಯವರು, ಖ್ಯಾತ ಕವಿ ಮಿರ್ಝಾ ಗಾಲಿಬ್ 18ನೇ ಶತಮಾನದಲ್ಲಿ ಪರ್ಶಿಯನ್ ಭಾಷೆಯಲ್ಲಿ ಬರೆದಿರುವ ‘ಖುಲ್ಲಿಯತೆ ಫಾರ್ಸಿ ಎ ಗಾಲಿಬ್’ ಕವನಗಳ ಸಂಕಲನವನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿಯವರಿಗೆ ಕೊಡುಗೆಯಾಗಿ ನೀಡಿದರು. 1863ರಲ್ಲಿ ಪ್ರಕಟವಾದ ಈ ಅಪೂರ್ವ ಕವನಸಂಕಲನವು 11 ಸಾವಿರಕ್ಕೂ ಅಧಿಕ ಪದ್ಯಗಳನ್ನು ಒಳಗೊಂಡಿದೆ.ಇದೇ ಸಂದರ್ಭದಲ್ಲಿ ಪರ್ಶಿಯನ್ ಭಾಷೆಯಲ್ಲಿ ಸುಮೈರ್‌ಚಂದ್ ಬರೆದಿರುವ ರಾಮಾಯಣದ ಪ್ರತಿಯೊಂದನ್ನು ಕೂಡಾ ಅವರು ರೂಹಾನಿಗೆ ಕೊಡುಗೆಯಾಗಿ ನೀಡಿದರು. 1715ರಲ್ಲಿ ಪರ್ಶಿಯನ್ ಭಾಷೆಗೆ ಸುಮೈರ್ ಚಂದ್ ಅನುವಾದಿಸಿರುವ ಈ ರಾಮಾಯಣ ಹಸ್ತಪ್ರತಿಯು 260ಕ್ಕೂ ಅಧಿಕ ರೇಖಾಚಿತ್ರಗಳನ್ನು ಒಳಗೊಂಡಿದೆ.





