ಬ್ರಹ್ಮನಗರದಲ್ಲಿ ವಿಶೇಷ ದಾಖಲಾತಿ ಆಂದೋಲನ

ಪುತ್ತೂರು, ಮೇ 23: ಶಿಕ್ಷಣ ಇಲಾಖೆಯ ವತಿಯಿಂದ ವಿಶೇಷ ದಾಖಲಾತಿ ಆಂದೋಲನ ಪುತ್ತೂರು ನಗರದ ಬ್ರಹ್ಮನಗರ ದಲಿತ ಕಾಲೊನಿ ಪ್ರದೇಶದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ನೇತೃತ್ವದಲ್ಲಿ ನಡೆಯಿತು.
ಬ್ರಹ್ಮನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ದಾಖಲಾತಿಗೆ ಅರ್ಹರಾಗಿರುವ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲು ಪೋಷಕರ ಮನವೊಲಿಸುವ ಪ್ರಯತ್ನ ನಡೆಸಿದರು. ಸರಕಾರ ಮತ್ತು ಸರ್ವ ಶಿಕ್ಷಣ ಅಭಿಯಾನದಿಂದ ದೊರೆಯುವ ವಿವಿಧ ಸೌಲಭ್ಯಗಳು, ಸರಕಾರಿ ಶಾಲೆಗಳಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ವಿಶೇಷ ಮಾಹಿತಿಯನ್ನು ಈ ಸಂದಭರ್ದಲ್ಲಿ ಅವರು ನೀಡಿದರು.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ, ಶಾಲೆ ಮತ್ತು ಪೋಷಕರದ್ದಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರು ಪ್ರಯತ್ನಿಸಬೇಕು ಎಂದು ಶಿಕ್ಷಣಾಧಿಕಾರಿ ತಿಳಿಸಿದರು.
ಬ್ರಹ್ಮನಗರ ಕಾಲೊನಿಯ ಸುಮಾರು 25 ಮನೆಗಳಿಗೆ ಭೇಟಿ ನೀಡಿ ಇಲಾಖೆಯ ಸೌಲಭ್ಯಗಳನ್ನು ಪ್ರಚುರಪಡಿಸುವ ಕರಪತ್ರವನ್ನು ನೀಡಿ ಮಕ್ಕಳನ್ನು ಶಾಲೆಗೆ ದಾಖಲಿಸಲು ವಿನಂತಿಸಿದರು. ಈ ಸಂದರ್ಭದಲ್ಲಿ ದಾಖಲಾತಿಗೆ ಅರ್ಹ 5 ಮಕ್ಕಳನ್ನು ಗುರುತಿಸಲಾಯಿತು.
ಶಿಕ್ಷಣ ಇಲಾಖೆಯ ಮನೆಭೇಟಿ ತಂಡದಲ್ಲಿ ಅಕ್ಷರ ದಾಸೋಹ ಯೋಜನೆಯ ಪ್ರಭಾರ ನಿರ್ದೇಶಕ ನವೀನ್ ಸ್ಟೀಫನ್ ವೇಗಸ್, ದಾಖಲಾತಿ ಆಂದೋಲನದ ನೋಡಲ್ ಬಿಆರ್‌ಪಿ ದಿನೇಶ್ ಗೌಡ ಕೆ., ಬಿಆ.ಪಿ ಸವಿತಾ ಗುಜರನ್, ಪುತ್ತೂರು ಕ್ಲಸ್ಟರ್ ಸಿಆರ್‌ಪಿ ಶಾಲಿನಿ ಬಿ., ಪುತ್ತೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೊರಗಪ್ಪ ನಾಯ್ಕ, ಸಹ ಶಿಕ್ಷಕಿ ತನುಜಾ ಎಂ., ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ ಮತ್ತಿತರರು ಇದ್ದರು.







