ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ ಲೈಸೆನ್ಸ್ ಅಮಾನತು ?
ಹೊಸದಿಲ್ಲಿ, ಮೇ 24: ಅಧಿಕ ವೇಗ, ಅಪಾಯಕಾರಿ ಚಾಲನೆ, ಸಂಚಾರಿ ನಿಮಯಗಳ ಉಲ್ಲಂಘನೆ, ಪಾನಮತ್ತರಾಗಿ ವಾಹನ ಚಲಾಯಿಸುವುದು ಹಾಗೂ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವುದು ಮತ್ತು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ಸ್ಥಳದಲ್ಲೇ ಡ್ರೈವಿಂಗ್ ಲೈಸನ್ಸ್ ಅಮಾನತು ಮಾಡಲು ಇದು ಕಾರಣವಾಗಬಹುದು.
ರಾಜ್ಯಗಳ ಸಾರಿಗೆ ಸಚಿವರ ಗುಂಪು ಇಂಥ ಒಂದು ವಿಧಿಯನ್ನು ಮೋಟಾರು ವಾಹನ ಕಾಯ್ದೆಗೆ ಸೇರಿಸಿ ಜಾರಿಗೆ ತರಲು ಅನುಮೋದನೆ ನೀಡಿದೆ. ಜತೆಗೆ ಇಂಥ ಅಪರಾಧಿಗಳಿಗೆ ಕಡ್ಡಾಯ ಪುನಶ್ಚೇತನ ತರಬೇತಿ ನೀಡಲು ಈ ವಿಧಿ ಸೂಚಿಸುತ್ತದೆ. ದಿಲ್ಲಿಯಲ್ಲಿ ಇಂಥ ಕಾನೂನು ಉಲ್ಲಂಘನೆಗಾಗಿ ಕಳೆದ ಆರು ತಿಂಗಳಲ್ಲಿ ಸುಮಾರು ಮೂರು ಲಕ್ಷ ಲೈಸನ್ಸ್ಗಳನ್ನು ಅಮಾನತು ಮಾಡಲಾಗಿದೆ.
ಯಾವುದೇ ಎಚ್ಚರಿಕೆ ಸಂದೇಶಗಳಿಲ್ಲದೇ ಪರದೆಯ ಮೇಲೆ ಅಧಿಕ ವೇಗದ ಹಾಗೂ ಬೇಕಾಬಿಟ್ಟಿ ಚಾಲನೆ ಮಾಡುವ ದೃಶ್ಯಗಳನ್ನೊಳಗೊಂಡ ಜಾಹೀರಾತು, ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ವಾಪಸ್ ಪಡೆಯಲು ಕೂಡಾ ಈ ಸಮಿತಿ ಸೂಚನೆ ನೀಡಿದೆ. ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ಚಾಲನೆ ಮತ್ತು ಸ್ಪರ್ಧಾತ್ಮಕ ಚಾಲನೆಗೆ ಕಟ್ಟುನಿಟ್ಟಿನ ದಂಡ ವಿಧಿಸುವ ವಿಧಿಯನ್ನು ಕೂಡಾ ಸಚಿವರ ತಂಡ ಅನುಮೋದಿಸಿದೆ.
ಮೊದಲ ಬಾರಿ ಉಲ್ಲಂಘನೆ ಮಾಡುವವರಿಗೆ 5 ಸಾವಿರ ರೂಪಾಯಿ ದಂಡ ಹಾಗೂ ಆರು ತಿಂಗಳು ಜೈಲು, ಮತ್ತೆ ಈ ಅಪರಾಧ ಎಸಗಿದರೆ 10 ಸಾವಿರ ರೂ. ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸದ ಚಾಲಕರಿಗೆ ಹೆಚ್ಚಿನ ದಂಡ ವಿಧಿಸಲು ಕೂಡಾ ನಿರ್ಧರಿಸಲಾಗಿದ್ದು, ಇದಕ್ಕೆ ಆರು ತಿಂಗಳು ಜೈಲು ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಂತೆಯೇ ವಾಹನ ವಿಮೆ ಇಲ್ಲದೇ ಚಾಲನೆ ಮಾಡುವವರಿಗೆ 2 ಸಾವಿರ ರೂ. ದಂಡ ಹಾಗೂ 3 ತಿಂಗಳು ಜೈಲು, ಮತ್ತೆ ಅದೇ ಉಲ್ಲಂಘನೆ ಮಾಡಿದರೆ 4 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ವಿಮೆ ಇಲ್ಲದ ವಾಹನಗಳು ಢಿಕ್ಕಿ ಹೊಡೆದ ಸಂತ್ರಸ್ತರಾದವರಿಗೂ ಪರಿಹಾರ ನೀಡಬೇಕಾಗುತ್ತದೆ.