ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳಿಂದ ಅವಮಾನ

ಬೆಂಗಳೂರು, ಮೇ 24: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಅವಮಾನ ಮಾಡಿರುವ ಘಟನೆಯು ಮಂಗಳವಾರ ತಡರಾತ್ರಿ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿ ಬಡಾವಣೆಯಲ್ಲಿ ಜರಗಿದೆ.
ಅಂಬೇಡ್ಕರ್ ಪುತ್ಥಳಿಯ ಕನ್ನಡಕವನ್ನು ಕಿಡಿಗೇಡಿಗಳು ಛಿದ್ರಗೊಳಿಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ)ಯ ಕಾರ್ಯಕರ್ತರು ಟೈರುಗಳಿಗೆ ಬೆಂಕಿ ಹಚ್ಚಿ, ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಶಾಂತಿ ಬಡಾವಣೆಯ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವ ಆರೋಪಿಗಳನ್ನು ಪೊಲೀಸರು ಶೀಘ್ರವಾಗಿ ಬಂಧಿಸಬೇಕು. ಇಲ್ಲದಿದ್ದರೆ, ಕೆ.ಆರ್.ಪುರ ಬಂದ್‌ಗೆ ಕರೆ ನೀಡಿ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಣಿಪಾಲ್ ರಾಜಪ್ಪ ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು. ಈ ಸಂದರ್ಭದಲ್ಲಿ ದಸಂಸ ಮುಖಂಡ ಎಂ.ಎನ್.ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







