ಕಳ್ತೂರು: ಜಲ್ಲಿ ಕ್ರಷರ್‌ಗೆ ನೀಡಿದ ನಿರಪೇಕ್ಷಣಾ ಪತ್ರ ರದ್ದುಗೊಳಿಸಲು ಗ್ರಾಮಸ್ಥರ ಮನವಿ

ಬ್ರಹ್ಮಾವರ, ಮೇ 24: ಉಡುಪಿ ತಾಲೂಕಿನ 38ನೇ ಕಳ್ತೂರು ಗ್ರಾಮದ ಸರ್ವೆ ನಂ. 26/11ರಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ನೀಡಿರುವ ಪರವಾನಿಗೆ ನಿರಪೇಕ್ಷಣಾ ಪತ್ರವನ್ನು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ 38ಕಳ್ತೂರು, ಚಾರ ಹಾಗೂ ನಾಲ್ಕೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಇಂದು ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಮನವಿ ಅರ್ಪಿಸಿದರು.
ಜಲ್ಲಿ ಕ್ರಷರ್‌ಗೆ ಪ್ರಸ್ತಾಪಿಸಲಾದ ಪ್ರದೇಶದ ಸುತ್ತ ಫಲವತ್ತಾದ ಕೃಷಿಭೂಮಿ ಇದ್ದು, ಅನೇಕ ವರ್ಷಗಳಿಂದ ಸುತ್ತಮುತ್ತ ನೂರಕ್ಕೂ ಅಧಿಕ ಮನೆಗಳಿವೆ. ಕಳ್ತೂರು, ಚಾರ ಹಾಗೂ ನಾಲ್ಕೂರು ಗ್ರಾಮಗಳಿಗೆ ಸಂಬಂಧ ಪಟ್ಟ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆರಾಧ್ಯ ದೈವವಾಗಿರುವ ಹುಣಸೆಬೆಟ್ಟು ಕಟ್ಟೆ ಅಮ್ಮ ದೇವಸ್ಥಾನ ಇದರ ಸಮೀಪದಲ್ಲೇ ಇದೆ.
ಅಲ್ಲದೇ ಚಾರ ಗ್ರಾಮದ ಹಂದಿಕಲ್ಲಿನಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಗ್ರಾಮಸ್ಥರಿಂದ ತೀವ್ರವಾದ ಪ್ರತಿರೋಧವಿದೆ. ಆದುದರಿಂದ ನವೀನ ಕೆ.ಅಡ್ಯಂತಾಯ/ಭಾರತಿ ಅಡ್ಯಂತಾಯ ಸಲ್ಲಿಸಿರುವ ಜಲ್ಲಿ ಕ್ರಷರ್ ಪರವಾನಿಗೆಗೆ ನಿರಪೇಕ್ಷಣಾ ಪತ್ರವನ್ನು ಕೂಡಲೇ ರದ್ದುಗೊಳಿಸಿ, ಮುಂದೆ ಯಾವುದೇ ರೀತಿ ಕಲ್ಲುಗಣಿಗಾರಿಕೆಗೆ ಪರವಾನಿಗೆ ನೀಡದಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಮನವಿ ಪತ್ರ ಸ್ವೀಕರಿಸಿದ ಬ್ರಹ್ಮಾವರದ ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ, ಘಟಕಕ್ಕೆ ಗ್ರಾಮಸ್ಥರಿಂದ ಯಾವುದೇ ವಿರೋಧ ಬಾರದ್ದರಿಂದ ತಾನು ಪರವಾ ನಿಗೆಗೆ ನಿರಪೇಕ್ಷಣಾ ಪತ್ರ ನೀಡಿರುವುದಾಗಿ ಹೇಳಿದಾಗ, ನೀವು ಗ್ರಾಮಸ್ಥರನ್ನು ಭೇಟಿಯಾಗದೇ, ಇಲ್ಲೇ ಕುಳಿತು ಈ ಪತ್ರ ನೀಡಿರುವುದಾಗಿ ಅವರು ವಾದಿಸಿದರು. ತಾನು ತಮ್ಮ ಈ ಮನವಿ ಪತ್ರವನ್ನು ಹಾಗೂ ಯೋಜನೆಗೆ ಗ್ರಾಮಸ್ಥರ ವಿರೋಧವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ತಿಪ್ಪೇಸ್ವಾಮಿ ಪ್ರತಿಭಟನ ಕಾರರಿಗೆ ಭರವಸೆ ನೀಡಿದರು.
ಕಳ್ತೂರಿನಲ್ಲಿ ಜಲ್ಲಿ ಕ್ರಷರ್ ಆರಂಭಿಸುವ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿದ ಗ್ರಾಮಸ್ಥರು, ಮೇ 28ರಂದು ಯೋಜಿತ ಸರ್ವೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಗ್ರಾಮದೊಳಗೆ ಕಾಲಿರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಜಲ್ಲಿ ಕ್ರಷರ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮುದ್ದು ಪೂಜಾರಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪ್ರಸನ್ನ ಕುಮಾರ್, ರವೀಂದ್ರನಾಥ ಶೆಟ್ಟಿ, ಗುಣಕರ ಶೆಟ್ಟಿ, ಮಿಥುನ್ ಶೆಟ್ಟಿ, ಅಶೋಕ್ ನಾಯ್ಕಿ, ರಘು ನಾಯ್ಕಿ ಸದಾನಂದ ನಾಯ್ಕಿ ಮುಂತಾದವರು ಭಾಗವಹಿಸಿದ್ದರು.







