ತಾಕೊಡೆ: ಟೆರೇಸ್‌ನಿಂದ ಬಿದ್ದು ಕಾರ್ಮಿಕ ಮೃತ್ಯು
ಮೂಡುಬಿದಿರೆ, ಮೇ 24: ತಾರಸಿ ಮನೆಯ ಮಹಡಿ ಮೇಲೆ ಶೀಟ್‌ನ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಅಕಸ್ಮಾತ್ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಕೋಡೆಯ ರಾಮಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸ್ಥಳೀಯ ಸುವರ್ಣನಗರದ ಆದಂ ಎಂಬವರ ಮಗ ಮುಹಮ್ಮದ್ ಆಶಿಕ್(18) ಮೃತ ಕಾರ್ಮಿಕ ಎಂದು ತಿಳಿದುಬಂದಿದೆ.
ರಾಮಬೈಲಿನಲ್ಲಿ ಸೋಮವಾರ ರಾತ್ರಿ ತಾರಸಿ ಮನೆಯ ಮೇಲೆ ಕೆಲವು ಕಾರ್ಮಿಕರ ಶೀಟ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ತಾರಸಿ ಮೇಲೆ ನಿಂತಿದ್ದ ಮಹಮ್ಮದ್ ಆಶಿಕ್ ಕೆಲವು ಕಬ್ಬಿಣದ ಸ್ವತ್ತುಗಳನ್ನು ತನಗಿಂತ ಮೇಲೆ ನಿಂತಿದ್ದ ಇನ್ನೊಬ್ಬ ಕಾರ್ಮಿಕನಿಗೆ ನೀಡುವಾಗ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟರೆನ್ನಲಾಗಿದೆ.
ರಾತ್ರಿ ಕಾರ್ಮಿಕರನ್ನು ದುಡಿಸಿಕೊಂಡಿದ್ದು ಹಾಗೂ ಅವರಿಗೆ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸದೆ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಗುತ್ತಿಗೆದಾರ ಮೂಡುಬಿದಿರೆಯ ಪುರಂದರ ದೇವಾಡಿಗ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





