ಇಬ್ಬರು ಮೃತ್ಯು, ಮೂವರು ಗಂಭೀರ
ಅಂಕೋಲಾ: ಭೀಕರ ರಸ್ತೆ ಅಪಘಾತ

ಅಂಕೋಲಾ, ಮೇ 24: ರಾ.ಹೆ.63ರ ಸುಂಕಸಾಳ ಕರಗಲಗದ್ದೆ ಸಮೀಪ ಲಾರಿ ಮತ್ತು ಟವೇರಾ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ 8 ಗಂಟೆ ಸುಮಾರಿಗೆ ನಡೆದಿದೆ. ಟವೇರಾ ಚಾಲಕ ಹಳೆ ಹುಬ್ಬಳ್ಳಿಯ ಶ್ರೀನಿವಾಸ ದೇಶಪಾಂಡೆ (50), ಹುಬ್ಬಳ್ಳಿ ಶಾಂತಿನಗರದ ಜೋಸೆಫ್ ಜೆರಾಲ್ಡ್(59) ಮೃತಪಟ್ಟ ವ್ಯಕ್ತಿಗಳು. ಸಂತೋಷ್ ಡಿಸೋಜಾ, ಹೆರ್ದಯರಾಜ್, ಅಂತೋನಿ ದಾಸ್ ಗಾಯಗೊಂಡ ವ್ಯಕ್ತಿಗಳು. ಗಾಯಾಳು ಸಂತೋಷ್ ಡಿಸೋಜಾ ಪಟ್ಟಣದ ಆರ್ಯಾ ಮೆಡಿಕಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನಿಬ್ಬರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿಐ ಅರುಣಕುಮಾರ್ ಜಿ. ಕೋಳೂರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಲಾರಿ ಚಾಲಕ ಕಲಘಟಗಿಯ ಸಂತೋಷ್ ರಾಮನಾಥ ಬಮ್ಮಿಘಟ್ಟಿ ವಿರುದ್ಧ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಎಸ್ಸೈ ದುರ್ಗಪ್ಪ ಕಲಘಟಗಿ ಸಿಬ್ಬಂದಿ ಮದರ ಸಾಬ್ ಚಿಕ್ಕೇರಿ, ದುರ್ಗಪ್ಪ ಹಾಜರಿದ್ದರು. ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸುವಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ಗುರು ಗೌಡ ಸಹಕರಿಸಿದರು.





