ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಅಗತ್ಯ
ರಾಷ್ಟ್ರೀಯ ಡೆಂಗ್ ದಿನಾಚರಣೆ
.jpg)
ಸಾಗರ, ಮೇ 24: ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನರಲ್ಲಿ ತುರ್ತು ಜಾಗೃತಿ ಮೂಡಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಯವರ ಸಭಾಂಗಣದಲ್ಲಿ ಮಂಗಳವಾರ ನಗರಸಭೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯವರ ಕಚೇರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಗ್ಯ ಇಲಾಖೆ ಪ್ರತಿ ವಾರ್ಡ್ ಹಾಗೂ ಗ್ರಾಮ ಪಂಚಾಯತ್ ಹಂತದಲ್ಲಿ ತಂಡವನ್ನು ರಚಿಸಿ, ಜನಪ್ರತಿನಿಧಿಗಳನ್ನು ಇರಿಸಿಕೊಂಡು ಜನಜಾಗೃತಿ ಮೂಡಿಸ ಬೇಕು. ಸ್ವಚ್ಛತಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ಸಾಂಕ್ರಾಮಿಕರೋಗ ಹರಡುವ ಭೀತಿ ಇರದು. ಜನರಲ್ಲಿ ಇಂದಿಗೂ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಲ್ಲ ಎಂದರು. ನಗರವ್ಯಾಪ್ತಿಯಲ್ಲಿ ಅನೇಕ ಚರಂಡಿಗಳು ಕಟ್ಟಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳಿವೆ. ನಗರಸಭೆ ಆಡಳಿತ ಈ ಬಗ್ಗೆ ನಿಗಾವಹಿಸಬೇಕು. ನಿಂತ ನೀರು, ಖಾಲಿ ಟೈರ್, ಎಳನೀರು ಸಿಪ್ಪೆ, ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಸವಿಲೇವಾರಿ ನಗರವ್ಯಾಪ್ತಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದೆ. ಅದನ್ನು ಇನ್ನಷ್ಟು ತ್ವರಿತಗೊಳಿಸುವ ನಿಟ್ಟಿನಲ್ಲಿ ಆಡಳಿತ ನಡೆಸುವವರು ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್ ಮಾತನಾಡಿ, ಮಳೆ ಬಿದ್ದಿರುವುದರಿಂದ ನಗರಸಭೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದೆ. ನಗರದ 31 ವಾರ್ಡ್‌ಗಳಲ್ಲೂ ಸ್ವಚ್ಛತಾ ಕಾರ್ಯವನ್ನು ಹಂತಹಂತವಾಗಿ ನಡೆಸುವ ಜೊತೆಗೆ ಸಾಂಕ್ರಾಮಿಕ ರೋಗ ಕುರಿತು ಕರಪತ್ರದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಅಗತ್ಯಬಿದ್ದರೆ ಫಾಗಿಂಗ್, ಸೊಳ್ಳೆನಾಶಕ ರಾಸಾಯನಿಕ ಸಿಂಪಡಣೆಗೆ ನಗರಸಭೆ ಸಿದ್ಧವಿದೆ ಎಂದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ. ಅಚ್ಚುತ್, ಸಿವಿಲ್ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಉಪಸ್ಥಿತರಿದ್ದರು. ಸುವರ್ಣ ಪ್ರಾರ್ಥಿಸಿದರು. ಝಾಕೀರ್ ಹುಸೈನ್ ವಂದಿಸಿದರು.







