ಗಾಂಜಾ ಮಾರಾಟಕ್ಕೆ ಯತ್ನ: ಐವರ ಬಂಧನ

ಮಂಗಳೂರು, ಮೇ 24; ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಐದು ಮಂದಿಯನ್ನು ಸಿಸಿಬಿ ಪೊಲೀಸರು ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ಬಂಧಿಸಿದ್ದಾರೆ.
ಅಡ್ಯಾರ್ ಗ್ರಾಮದ ವಳಚ್ಚಿಲ್‌ನ ಶರೀಫ್ ವಿ.ಎಚ್.(36), ಕುಲಶೇಖರದ ಹರ್ಷಿತ್ (36) ಹಾಗೂ ದೀಕ್ಷಿತ್ ಪೂಜಾರಿ (37), ಮೂಡುಶೆಡ್ಡೆ ಶಿವನಗರದ ಇಮ್ರಾನ್ (30) ಮತ್ತು ಶಕ್ತಿನಗರದ ಪ್ರಥ್ವಿರಾಜ್ (25) ಬಂಧಿತರು.
ಬಂಧಿತರು ತೊಕ್ಕೊಟ್ಟು ಒಳಪೇಟೆಯಲ್ಲಿ ಒಂದು ಫಿಯೆಟ್ ಪುಂಟೋ ಕಾರು ಮತ್ತು ಬಜಾಜ್ ಡಿಸ್ಕವರ್ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಿವಶಂಕರ್ ಜೊತೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುವುದಾಗಿ ಬಂಧಿತರು ತಿಳಿಸಿದ್ದು, ಇವರಿಂದ ಒಟ್ಟು ಒಟ್ಟು 10 ಲಕ್ಷ ರೂ. ವೌಲ್ಯದ 5 ಕೆ.ಜಿ ಗಾಂಜಾ, ಫಿಯೆಟ್ ಪುಂಟೋ ಕಾರು, ಬಜಾಜ್ ಡಿಸ್ಕವರ್ ಬೈಕ್, 9 ಮೊಬೈಲ್ ಪೋನ್‌ಗಳು, 1,105 ರೂ.ನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಡಾ.ಸಂಜೀವ ಪಾಟೀಲ್ ಮಾರ್ಗದಶರ್ನದಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಮತ್ತು ಸಬ್ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.







