ಮಂಜೇಶ್ವರ: ಶಾಲೆಗೆ ಕಿಡಿಗೇಡಿಗಳಿಂದ ಬೆಂಕಿ; ಅಪಾರ ಹಾನಿ
.jpg)
ಮಂಜೇಶ್ವರ, ಮೇ 24: ಕಡಂಬಾರು ಸರಕಾರಿ ಶಾಲೆಯ ಅಪ್ಪರ್ ಪ್ರೈಮರಿ ವಿಬಾಗಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಶಾಲೆಯ ಸ್ಟಾಫ್ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿರುವ ಕಿಡಿಗೇಡಿಗಳು ಬೆಂಕಿ ಇರಿಸಿದ್ದು, ಇದರಿಂದ ಅಲ್ಲಿದ್ದ ಪುಸ್ತಕಗಳನ್ನು ಪೇರಿಸಿರುವ ಮರದ ಕಪಾಟು ಹಾಗೂ ಶಾಲಾ ಪಠ್ಯಪುಸ್ತಕಗಳು ಉರಿದು ನಾಶವಾಗಿದೆ.
ಸೋಮವಾರ ಸಂಜೆ ಅಧ್ಯಾಪಕ ನಾಗರಾಜ ಎಂಬವರಿಗೆ ಶಾಲೆಯೊಳಗಿಂದ ಹೊಗೆ ಬರುತ್ತಿರುವುದು ಕಂಡುಬಂದಿದ್ದು, ಗಮನಿಸಿದಾಗ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿ ಸಾಗುತ್ತಿದ್ದ ಅಟೋರಿಕ್ಷಾ ನಿಲ್ಲಿಸಿ ಚಾಲಕ ಚಂದ್ರಶೇಖರ, ಪ್ರಯಾಣಿಕ ಹೇಮಚಂದ್ರರನ್ನು ಜೊತೆ ಸೇರಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಪರಿಸರದಿಂದ ನಾಲ್ವರು ಪರಾರಿಯಾಗಿ ಓಡುತ್ತಿರುವುದನ್ನು ಕಂಡಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಮರದ ಕಪಾಟು,ಅದರಲ್ಲಿದ್ದ ಪುಸ್ತಕಗಳು, ಅಧ್ಯಾಪಕರ ಕೈಪಿಡಿಗಳು, ಪಠ್ಯಪುಸ್ತಕಗಳು ಉರಿದು ಸ್ಮವಾಗಿದೆ. ಜೊತೆಗೆ ಪಕ್ಕದ ತರಗತಿ ಕೊಠಡಿಗೂ ನುಗ್ಗಿದ್ದ ಕಿಡಿಗೇಡಿಗಳು ಬೆಂಚು, ಡೆಸ್ಕುಗಳನ್ನು ಮುಗುಚಿ ಕಿಟಕಿ ಸರಳುಗಳನ್ನು ಮುರಿದಿರುವುದು ಕಂಡುಬಂದಿದೆ. ಗೋಡೆಗೆ ತೂತು ಕೊರೆದು ಅವಾಚ್ಯ ಶಬ್ದಗಳನ್ನು ಬರೆಯಲಾಗಿರುವುದು ಕಂಡುಬಂದಿದೆ. ಕತ್ತಿ,ಸುತ್ತಿಗೆಗಳೂ ಪರಿಸರದಲ್ಲಿ ಕಂಡುಬಂದಿದೆ.
ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.







