ಬೆಳ್ತಂಗಡಿ: ಕೃಷಿಭೂಮಿಯಲ್ಲಿ ಕೊರಂಬಾಡು ಕೆರೆಯನ್ನು ಪುನರ್‌ನಿರ್ಮಿಸಲು ಮುಂದಾದ ಅಧಿಕಾರಿಗಳು

ಬೆಳ್ತಂಗಡಿ, ಮೇ 24: ಸಾವ್ಯ ಗ್ರಾಮದ ಕೊರಂಬಾಡು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಮುಂದಿಟ್ಟುಕೊಂಡು ದಲಿತ ಸಮುದಾಯಕ್ಕೆ ಸೇರಿದ ಕೃಷಿಕ ಕುಟುಂಬವೊಂದು ಹಲವು ದಶಕಗಳಿಂದ ಕೃಷಿ ಮಾಡುತ್ತಾ ಬಂದಿದ್ದ ಗದ್ದೆಯನ್ನು ಕೆರೆಯನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಅನ್ಯಾಯಕ್ಕೆ ಒಳಗಾದ ಮನೆಯವರು ಇದೀಗ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು ಕಾಮಗಾರಿ ಸ್ಥಗಿತಗೊಂಡಿದೆ. ಸಾವ್ಯ ಗ್ರಾಮದ ನಿವಾಸಿ ರಾಜೇಶ್ ಜೈನ್ ಎಂಬವರು ಉಚ್ಚ ನ್ಯಾಯಾಲಯದಲ್ಲಿ ಕೊರಂಬಾಡು ಕೆರೆಯಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಬೇಕು ಎಂದು ಖಾಸಗಿ ದೂರು ದಾಖಲಿಸಿದ್ದರು. ಅದರಂತೆ ನ್ಯಾಯಲಯವು ಹೂಳೆತ್ತಲು 2013 ರಲ್ಲಿ ಆದೇಶ ನೀಡಿತ್ತು. ಆದರೆ ಅದರಲ್ಲಿ ಸರ್ವೆ ನಂಬರ್ ಹಾಗೂ ನಕ್ಷೆ ದಾಖಲಿಸಲಾಗಿಲ್ಲ.
ಕೊರಂಬಾಡು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪುಟ್ಟ ಹಾಗೂ ಕುಟುಂಬದವರು ವಾಸಿಸುತ್ತಿದ್ದು ಸುಮಾರು ಮೂರು ಎಕ್ರೆ ಸರಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಾ ಬಂದಿದ್ದರು. ಇದೀಗ ಸದ್ರಿ ಗದ್ದೆಯಲ್ಲಿ ಒಂದುವರೆ ಎಕ್ರೆ ಜಮೀನು ಕೆರೆಯಾಗಿತ್ತು ಎಂಬ ವಾದವನ್ನು ದೂರುದಾರ ರಾಜೇಶ್ ಹಾಗೂ ಇತರರು ಮುಂದಿಡುತ್ತಿದ್ದು ಅಲ್ಲಿ ಹೂಳೆತ್ತಿ ಕೆರೆಯನ್ನು ಪುನರ್‌ನಿರ್ಮಿಸಬೇಕು ಎಂಬ ವಾದವನ್ನು ಮುಂದಿಡುತ್ತಿದ್ದಾರೆ.
ನ್ಯಾಯಾಲಯದ ಆದೇಶವನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಪುಟ್ಟ ಅವರು ಕೃಷಿ ಮಾಡುವ ಜಮೀನಿನಲ್ಲಿ ಕೆರೆಯನ್ನು ತೋಡಲು ಮುಂದಾಗಿದ್ದರು ಮಣ್ಣುತೆಗೆಯುವ ಯಂತ್ರಗಳೊಂದಿಗೆ ಬಂದಿದ್ದ ಅಧಿಕಾರಿಗಳು ಗದ್ದೆಯ ನಡುವೆಯೇ ಕೆರೆಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪುಟ್ಟ ಮತ್ತು ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಪುಟ್ಟ ಹಾಗೂ ಕುಟುಂಬಸ್ಥರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದು ಕಾವಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.
ತಾಲೂಕಿನಲ್ಲಿರುವ ಕೆರೆಗಳ ಪಟ್ಟಿಯಲ್ಲಿ ಕೊರಂಬಾಡು ಕೆರೆಯ ಹೆಸರಿದ್ದರೂ ಅದರ ಸರ್ವೇ ನಂಬರ್ ದಾಖಲಾಗಿಲ್ಲ. ಅದೇ ಈಗಿನ ಗೊಂದಲಗಳಿಗೆ ಕಾರಣವಾಗಿದೆ. ಇದೀಗ ದಲಿತ ಕುಟುಂಬ ಕಳೆದ ಹಲವು ದಶಕಗಳಿಂದ ಇಲ್ಲಿ ಕೃಷಿ ಮಾಡಿ ಬದುಕುತ್ತಿದ್ದಾರೆ. ಇವರು ಈ ಜಾಗಕ್ಕೆ ಅಕ್ರಮ ಸಕ್ರಮದಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಮೊದಲು ತಹಶೀಲ್ದಾರರು ಅರ್ಜಿಯನ್ನು ತಿರಸ್ಕರಿಸಿದ್ದರು. ಅವರು ಈ ಆದೇಶದ ವಿರುದ್ಧ ಪುತ್ತೂರು ಸಹಾಯಕ ಕಮಿಷನರ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿ ನಿರಾಕರಿಸಿದಾಗ ನೀಡಿದ ಕಾರಣ ಸರಿಯಾಗಿಲ್ಲ ಎಂದು ಪ್ರಕರಣದ ಮರು ತನಿಖೆ ಮಾಡುವಂತೆ ಬೆಳ್ತಂಗಡಿ ತಹಶೀಲ್ದಾರರಿಗೆ ಸೂಚಿಸಿದ್ದರು.
ಈ ನಡುವೆ ಉಚ್ಚ ನ್ಯಾಯಾಲಯದಿಂದ ಬಂದಿರುವ ಆದೇಶ ಈ ಕುಟುಂಬದ ನೆಮ್ಮದಿಯನ್ನು ಕೆಡಿಸಿದೆ. ಇವರಿಗೆ ಇಲ್ಲಿ ಕೆರೆ ಇದ್ದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ ಈಗ ಬಂದಿರುವ ಆದೇಶ ತಮ್ಮ ಜಮೀನನ್ನು ಕೆರೆಯಾಗಿ ಪರಿವರ್ತಿಸಲಿದೆಯೇ ಎಂಬ ಆತಂಕದಲ್ಲಿದ್ದಾರೆ ಇವರು.
ತಾಲೂಕಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಕೆರೆಗಳು ಅಕ್ರಮವಾಗಿರುವ ಬಗ್ಗೆ ದಾಖಲೆಗಳಿವೆ ಇದರಲ್ಲಿ ಹೆಚ್ಚಿನ ಕೆರೆಗಳು ಅಕ್ರಮವಾಗಿರುವುದು ಬಲಿಷ್ಠ ಭೂ ಮಾಲಕರಿಂದಲೇ ಆಗಿದೆ. ಕೆಲವು ಕೆರೆಗಳ ವಿಚಾರದಲ್ಲಿ ಉಚ್ಚ ನ್ಯಾಯಾಲಯದಿಂದ ತೆರವಿಗೆ ಆದೇಶವೂ ಬಂದಿದೆ ಆದರೆ ಅದು ಯಾವುದನ್ನೂ ಕಾರ್ಯ ರೂಪಕ್ಕೆ ತರಲು ಮುಂದಾಗದ ತಾಲೂಕು ಆಡಳಿತ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ದಲಿತರ ಕೈಯಲ್ಲಿರುವ ಜಮೀನನ್ನು ವಶಪಡಿಸಲು ಆತುರ ತೋರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಶೇಖರ ಲಾಯಿಲ, ದಲಿತ ಹಕ್ಕುಗಳ ಹೋರಾಟ ಸಮಿತಿ.







