ಪುತ್ತೂರು ತಾಪಂ ಪ್ರಥಮ ಸಾಮಾನ್ಯ ಸಭೆ
ಪುತ್ತೂರು, ಮೇ 24: ಪುತ್ತೂರು ತಾಲೂಕಿನಲ್ಲಿ ಸುಮಾರು 150ಕ್ಕೂ ಅಧಿಕ ಡೆಂಗ್ ಪ್ರಕರಣವಿದ್ದು, ಆರೋಗ್ಯ ಇಲಾಖೆಯ ದಾಖಲೆಗಳು ಸರಿಯಾಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಕರಣಗಳು ಆರೋಗ್ಯ ಇಲಾಖೆಯ ದಾಖಲೆಗೆ ಸಿಗುತ್ತಿಲ್ಲ. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಾಪಂ ಸದಸ್ಯರು ಆಗ್ರಹಿಸಿದರು.
ಪುತ್ತೂರು ತಾಪಂನ ಪ್ರಥಮ ಸಾಮಾನ್ಯ ಸಭೆಯು ಅಧ್ಯಕ್ಷೆ ಭವಾನಿ ಚಿದಾನಂದರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್, ಡೆಂಗ್ ಕುರಿತು ಮಾಹಿತಿ ನೀಡುತ್ತಾ ತಾಲೂಕಿನ ಕಡಬದಲ್ಲಿ 2, ಕಾಣಿಯೂರು 3, ಕೊಲ 3, ಪಾಣಾಜೆ 3, ಸರ್ವೆ 1, ಉಪ್ಪಿನಂಗಡಿ 1 ಸೇರಿದಂತೆ ಒಟ್ಟು 13 ಡೆಂಗ್ ಪ್ರಕರಣ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 102 ಸಂಶಯಾಸ್ಪದ ಜ್ವರ ಪ್ರಕರಣ ಕಂಡುಬಂದಿದೆ. ಇದುವರೆಗೆ 609 ಮನೆಗಳಿಗೆ ಫಾಗಿಂಗ್ ಕಾರ್ಯನಡೆಸಲಾಗಿದೆ. ರೋಗ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. 900ಕ್ಕೂ ಅಧಿಕ ಮನೆಗಳಿಗೆ ಡೆಂಗ್ ತಡೆಯುವ ಕುರಿತು ಕರಪತ್ರ ನೀಡಲಾಗಿದೆ ಎಂದರು. ಇದನ್ನು ಆಕ್ಷೇಪಿಸಿದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಪ್ರತೀ ಗ್ರಾಮದಲ್ಲಿ 5-6 ಡೆಂಗ್ ಪ್ರಕರಣ ಪತ್ತೆಯಾಗುತ್ತಿದೆ. ಆದರೆ ತಾಲೂಕಿನಲ್ಲಿ ಕೇವಲ 13 ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡುತ್ತಾರೆ. ಹಾಗಾದರೆ ಉಳಿದ ಜ್ವರ ಪ್ರಕರಣಗಳನ್ನು ಏನೆಂದು ಪರಿಗಣಿಸಿದ್ದೀರಿ? ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ರೋಗಿಗಳ ಮಾಹಿತಿಯನ್ನೇ ತೆಗೆದುಕೊಳ್ಳುತ್ತಿಲ್ಲ. ರೋಗದ ಸಮಗ್ರ ಮಾಹಿತಿ ಸಂಗ್ರಹಿಸುವುದರೊಂದಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಸದಸ್ಯ ಫಝಲ್ ಕೋಡಿಂಬಾಳ ಮತ್ತು ಜಿಪಂ ಸದಸ್ಯ ಪಿ.ಪಿ. ವರ್ಗೀಸ್ ಈ ಮಾತಿಗೆ ಧ್ವನಿಗೂಡಿಸಿದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ವೈದ್ಯರ ಕೊರತೆ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದರು.ರ್ಚೆಗೆ ಗ್ರಾಸವಾದ ಎಸೆಸೆಲ್ಸಿ ಫಲಿತಾಂಶ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಮಿಶನ್ 95+ ಯಶಸ್ಸಿಗೆ ಕ್ಷೇತ್ರ ಶಿಕ್ಷಣಾಧಿಕಾಧಿಕಾರಿಗಳು ಮತ್ತು ತಂಡ ಸಾಕಷ್ಟು ಶ್ರಮ ವಹಿಸಿದ್ದರೂ ಯಾಕೆ ಫಲಿತಾಂಶ ಕಡಿಮೆಯಾಗಿದೆ ಎಂದು ಸದಸ್ಯ ರಾಧಾಕೃಷ್ಣ ಬೋರ್ಕರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಣ ಇಲಾಖೆಗೆ ಮಂಜೂರಾದ 1,007 ಹುದ್ದೆಗಳ ಪೈಕಿ 227 ಹುದ್ದೆ ಖಾಲಿಯಾಗಿದೆ. 6 ಶಾಲೆಗಳಿಗೆ ಜೂ.26ರಂದು ಕೌನ್ಸಿಲ್ ನಡೆಯಲಿದೆ. ಮಿಷನ್ 95+ ಗುರಿ ತಲುಪುವಲ್ಲಿ ವಿಫಲವಾಗಿರಬಹುದು. ಆದರೆ ಪುತ್ತೂರು ತಾಲೂಕು ಜಿಲ್ಲೆಯಲ್ಲಿ 2ನೆ ಸ್ಥಾನ ಪಡೆದುಕೊಂಡಿದೆ. ರಾಜ್ಯದ 204 ತಾಲೂಕುಗಳ ಪೈಕಿ 24ನೆ ಸ್ಥಾನ ಪಡೆದುಕೊಂಡಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ತಹಶೀಲ್ದಾರ್‌ರಾದ ಸಣ್ಣ ರಂಗಯ್ಯ, ಬಿ. ನಿಂಗಯ್ಯ ಉಪಸ್ಥಿತರಿದ್ದರು. ತಾಪಂ ಇಒ ಜಗದೀಶ್ ಎಸ್. ಸ್ವಾಗತಿಸಿದರು.







