ಕಳೆದ ಮೂರು ವರ್ಷಗಳಲ್ಲಿ 'ಮಕ್ಕಳ ಕಾಣೆಯಲ್ಲಿ' 84% ಹೆಚ್ಚಳ
ಪೋಷಕರೇ ನಿರ್ಲಕ್ಷ್ಯ ಬೇಡ
ಹೊಸದಿಲ್ಲಿ, ಮೇ 25: ಪೋಷಕರೇ ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ. 2013 ರಿಂದ 2015ರ ಅವಧಿಯಲ್ಲಿ ಮಕ್ಕಳ ನಾಪತ್ತೆಯಲ್ಲಿ ದೇಶಾದ್ಯಂತ ಶೇಕಡ 84 ರಷ್ಟು ಹೆಚ್ಚಳವಾಗಿದೆ. ಅದರಲ್ಲೂ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಅತ್ಯಧಿಕ ಎನ್ನುವುದನ್ನು ಸ್ವಯಂ ಸೇವಾ ಸಂಸ್ಥೆಯೊಂದು ಬಹಿರಂಗಪಡಿಸಿದೆ.
ಚೈಲ್ಡ್ ರೈಟ್ಸ್ ಅಂಡ್ ಯು (ಕ್ರೈ) ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿದಿನ 180 ಮಕ್ಕಳು ಕಾಣೆಯಾಗುತ್ತಿದ್ದಾರೆ. ಅದರಲ್ಲಿ ದೆಹಲಿಯಿಂದ ಕಾಣೆಯಾಗುವ ಮಕ್ಕಳ ಸಂಖ್ಯೆ ಸರಾಸರಿ 22. 2015ರಲ್ಲಿ ಹೀಗೆ ನಾಪತ್ತೆಯಾದ ಮಕ್ಕಳ ಪೈಕಿ 62,988 ಮಂದಿ ಪತ್ತೆಯಾಗಿಲ್ಲ. 2013 ರಲ್ಲಿ ಈ ಪ್ರಮಾಣ 34,244 ಇತ್ತು ಎನ್ನುವುದು ಗೃಹಸಚಿವಾಲಯದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
2015ರಲ್ಲಿ ನಾಪತ್ತೆಯಾದ ಮಕ್ಕಳ ಪೈಕಿ ಮಹಾರಾಷ್ಟ್ರದ 9,414 ಮಕ್ಕಳು ಮತ್ತು ದೆಹಲಿಯ 9,001 ಮಕ್ಕಳು ಪತ್ತೆಯಾಗಿಲ್ಲ. ಈ ಎರಡು ರಾಜ್ಯಗಳಲ್ಲಿ ಮಕ್ಕಳ ನಾಪತ್ತೆ ಅತ್ಯಧಿಕ ಎಂದು ಕ್ರೈ ಹೇಳುತ್ತದೆ.
ಮಧ್ಯಪ್ರದೇಶ, ಅಸ್ಸಾಂ ಹಾಗೂ ಹರ್ಯಾಣ ನಂತರದ ಸ್ಥಾನದಲ್ಲಿವೆ. ಈ ಮೂರು ರಾಜ್ಯಗಳಲ್ಲಿ ಪತ್ತೆಯಾಗದ ಮಕ್ಕಳ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಶೇಕಡ 60ರಷ್ಟು ಹೆಚ್ಚಿದೆ. ನಾಪತ್ತೆ ಬಗ್ಗೆ ವಿಳಂಬವಾಗಿ ದೂರು ನೀಡುವುದು ಮತ್ತು ಅಸಮರ್ಪಕ ತನಿಖೆ ಇದಕ್ಕೆ ಮುಖ್ಯ ಕಾರಣ ಎಂದು ಸಂಸ್ಥೆಯ ನಿರ್ದೇಶಕರಾದ ಕೋಮಲ್ ಗಣೋತ್ರ ಹೇಳುತ್ತಾರೆ.
ಇಂಥ ಮಕ್ಕಳನ್ನು ಬಹುತೇಕ ಸಂಘಟಿತ ಅಪರಾಧ, ಅಕ್ರಮ ಬಾಲಕಾರ್ಮಿಕ ಪದ್ಧತಿ ಹಾಗೂ ಕಳ್ಳಸಾಗಾಣಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.