ಬ್ರೆಡ್ ತಿನ್ನುವುದು ಸುರಕ್ಷಿತ : ಎಫ್ಎಸ್ಎಸ್ಎಐ
ಹೊಸದಿಲ್ಲಿ, ಮೇ 25: ಪ್ರತಿದಿನ ಬೇಕರಿ ಉತ್ಪನ್ನಗಳನ್ನು ಸೇವಿಸುವುದು ಕ್ಯಾನ್ಸರ್ಗೆ ಕಾರಣವಾಗಬಹುದು. ಬೇಕರಿ ಉತ್ಪನ್ನಗಳಲ್ಲಿ ಕ್ಯಾನ್ಸರ್ಕಾರಕವಾದ ಪೊಟ್ಯಾಶಿಯಂ, ಬ್ರೋಮೇಟ್ನಂಥ ಅಂಶಗಳು ಅಧಿಕವಾಗಿವೆ ಎಂದು ವಿಜ್ಞಾನ ಹಾಗೂ ಪರಿಸರ ಕೇಂದ್ರ ಹೇಳಿಕೆ ನೀಡಿದ ಬೆನ್ನಲ್ಲೇ, ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಸಂಸ್ಥೆ (ಎಫ್ಎಸ್ಎಸ್ಎಐ) ವ್ಯತಿರಿಕ್ತ ಹೇಳಿಕೆ ನೀಡಿ, ಜನ ಈ ಬಗ್ಗೆ ಭೀತಿಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೇಕರಿ ಉತ್ಪನ್ನಗಳಲ್ಲಿ ಪೊಟ್ಯಾಶಿಯಂ ಬ್ರೋಮೇಟ್ ಬಳಸುವುದನ್ನು ಎಫ್ಎಸ್ಎಸ್ಎಐ ನಿಷೇಧಿಸಿದ್ದರೂ, ಬ್ರೆಡ್ ಸೇವನೆ ಖಂಡಿತವಾಗಿಯೂ ಸುರಕ್ಷಿತ ಎಂದು ಸಮರ್ಥಿಸಿಕೊಂಡಿದೆ.
ಎಫ್ಎಸ್ಎಸ್ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಅಗರ್ವಾಲ್ ಈ ಬಗ್ಗೆ ಎನ್ಡಿಟಿವಿ ಜತೆ ಮಾತನಾಡಿ, "ಪೊಟ್ಯಾಶಿಯಂ ಬ್ರೋಮೇಟ್ ಕ್ಯಾನ್ಸರ್ಕಾರಕ ಎಂದು ಖಚಿತಪಡಿಸುವ ನಿದರ್ಶನಗಳಿಲ್ಲ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ನಾವು ಪೊಟ್ಯಾಶಿಯಂ ಬ್ರೋಮೇಟ್ ನಿಷೇಧಿಸಿದ್ದೇವೆ.
ಇಷ್ಟಾಗಿಯೂ ಬ್ರೆಡ್ ಸೇವನೆ ಸುರಕ್ಷಿತ. ಜಾಗತಿಕ ಗುಣಮಟ್ಟವನ್ನು ಪರಾಮರ್ಶಿಸಿ, ಭಾರತಕ್ಕೇ ಪ್ರತ್ಯೇಕವಾದ ಗುಣಮಟ್ಟವನ್ನು ನಿಗದಿಪಡಿಸಲಾಗಿದೆ" ಎಂದು ಹೇಳಿದರು.
ಗ್ರಾಹಕರು ಹಾಗೂ ಆಹಾರ ಸುರಕ್ಷಾ ಸಂಸ್ಥೆಗೆ ಈ ಬಗ್ಗೆ ಯಾವುದೇ ಭೀತಿ ಇಲ್ಲದಿದ್ದರೂ, ಬ್ರೆಡ್ ಕಂಪನಿಗಳ ಉತ್ಪನ್ನಗಳ ಬೇಡಿಕೆ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಟ್ಟನ್ನು ಸಂಸ್ಕರಿಸಲು ಬಳಸುವ ಪೊಟ್ಯಾಶಿಯಂ ಬ್ರೋಮೇಡ್ ಬಳಕೆಯನ್ನು ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಶ್ರೀಲಂಕಾ ವರ್ಷದ ಹಿಂದೆಯೇ ನಿಷೇಧಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹಾರ ಗುಣಮಟ್ಟ ನಿಗದಿಪಡಿಸುವ ಕೊಡೆಕ್ಸ್ ಸಂಸ್ಥೆ ಕೂಡಾ 2012ರಲ್ಲೇ ಇದು ಸುರಕ್ಷಿತವಲ್ಲ ಎಂದು ಪರಿಗಣಿಸಿದೆ.