ಹೃದಯಾಘಾತ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಹೃದಯದೊಳಗಿತ್ತು ಬುಲೆಟ್ !

ಅಹ್ಮದಾಬಾದ್, ಮೇ 25: ರಾಯಖಡ್ ನಗರದ ತನ್ನ ಮನೆಯ ಹೊರಗೆ ಮಂಚದಲ್ಲಿ ಮಲಗಿದ್ದ 28 ವರ್ಷದ ಹಂಸಾ ಚೌಧುರಿಗೆ ಒಮ್ಮೆಗೇ ಎದೆಯಲ್ಲಿ ಅತೀವ ನೋವಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಆಕೆಗೆ ಹೃದಯಾಘಾತವಾಗಿಲ್ಲವೆಂಬುದನ್ನು ದೃಢಪಡಿಸಿದ್ದರೂ ಮರುದಿನ ಆಕೆಯ ಬಲ ಎದೆಯ ಭಾಗದಲ್ಲಿ ರಕ್ತ ಕಂಡ ನಂತರ ಎಕ್ಸ್-ರೇ ತೆಗೆಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಆಕೆಯ ಎದೆಯೊಳಗೆ ಬುಲೆಟ್ ಒಂದು ಹೊಕ್ಕಿತ್ತು, ಅಂದರೆ ಆಕೆಗೆ ಯಾರೋ ಗುಂಡಿಕ್ಕಿದ್ದರು. ಬುಲೆಟ್ ಆಕೆಯ ಎದೆಯ ಮಧ್ಯ ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ನಗರದ ವಿ ಎಸ್ ಆಸ್ಪತ್ರೆಯ ವೈದ್ಯರು ಐದು ಗಂಟೆ ಅವಧಿಯ ಶಸ್ತ್ರಕ್ರಿಯೆಯ ನಂತರ ಆಕೆಯ ಎದೆಯೊಳಗೆ ಹೊಕ್ಕಿದ್ದ ಗುಂಡನ್ನು ಹೊರತೆಗೆದಿದ್ದು ಹಂಸಾ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಗಾಯಕ್ ವಾಡ್ ಹವೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಮನ್ಸೂರಿ ನಿ ಚಲಿ ಪ್ರದೇಶದ ನಿವಾಸಿಯಾಗಿರುವ ಹಂಸರಿಗೆ ಇನ್ನೂ ತನಗೆ ಯಾರೋ ಗುಂಡಿಕ್ಕಿದ್ದಾರೆಂಬುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ. ‘‘ತುಂಬಾ ಸೆಖೆಯಿದ್ದ ಕಾರಣ ನಾನು ಹಾಗೂ ನನ್ನ ಮೂರು ವರ್ಷದ ಪುತ್ರ ಜಯದೀಪ್ ಹೊರಗೆ ಮಂಚದಲ್ಲಿ ಮಲಗಿದ್ದೆವು. ರಾತ್ರಿ ಸುಮಾರು 11.30ರ ಹೊತ್ತಗೆ ನನ್ನ ಎದೆಯೊಳಗೆ ಉರಿತದ ಅನುಭವವಾಯಿತು. ನನಗೆ ಹೃದಯಾಘಾತವಾಯಿತು ಎಂದುಕೊಂಡೆ’’ಎನ್ನುತ್ತಾರೆ ಹೊಟ್ಟೆ ಹೊರೆಯಲು ಇತರರ ಮನೆಗೆಲಸ ನಿರ್ವಹಿಸುವ ಹಂಸ.
ನೆರೆಮನೆಯವರ ಗೋಡೆಯೊಂದು ಕುಸಿದು ಕೆಲವರು ಗಾಯಗೊಂಡಿದ್ದರಿಂದ ಅವರೊಂದಿಗೆ ಆ ಸಮಯ ತಾನು ಆಸ್ಪತ್ರೆಯಲ್ಲಿದ್ದೆನೆಂದು ಆಕೆಯ ಪತಿ ಆಟೋ ಚಾಲಕನಾಗಿರುವ ಜಗದೀಶ್ ಹೇಳುತ್ತಾರೆ.
ಆದರೂ ಈ ಘಟನೆ ಇನ್ನೂ ರಹಸ್ಯಮಯವಾಗಿಯೇ ಉಳಿದು ಬಿಟ್ಟಿದ್ದು ಗುಂಡು ತಾಗಿ ರಕ್ತ ಒಸರುತ್ತಿದ್ದರೂ ಹೇಗೆ ಗೊತ್ತಾಗಿಲ್ಲವೆಂದು ಕೇಳಿದಾಗ ಹಂಸ ತಾನು ಅತಿಯಾಗಿ ಬೆವರುತ್ತಿದ್ದುದರಿಂದ ತನಗೆ ಗೊತ್ತಾಗಿಲ್ಲವೆಂಬ ಸಮಜಾಯಿಷಿ ನೀಡಿದ್ದಾಳೆ. ಹಂಸಾ ಮತ್ತಾಕೆಯ ಗಂಡ ತಮಗೆ ಯಾರೂ ವೈರಿಗಳಿಲ್ಲವೆಂದೂ ಹೇಳಿಕೊಂಡಿದ್ದಾರೆ.







