ಪುತ್ತೂರು ನಗರಸಭೆ: ಮನೆ ನಂಬ್ರ, ವಿದ್ಯುತ್ ಬಿಲ್ಲು ರಿಯಾಯಿತಿಗೆ ಮನವಿ

ಪುತ್ತೂರು, ಮೇ 25: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರಿಗೆ ಮನೆ ನಂಬ್ರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈಗಾಗಲೆ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವರಿಗೆ ಮನೆ ನಂಬ್ರ ನೀಡಲು ಅವಕಾಶಗಳಿಲ್ಲದ ಕಾರಣ ಅವರು ಮೂಲಸೌಕರ್ಯಗಳಾದ ನೀರು ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳಲು ತೊಂದರೆಯಾಗಿದೆ. ಹಲವು ವರ್ಷಗಳಂದ ಇಂತಹ ಮನೆಗಳಲ್ಲಿ ವಾಸವಾಗಿರುವ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳು ಈಗಾಗಲೇ 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅಂತಹ ಫಲಾನುಭವಿಗಳಿಗೆ ಮನೆ ನಂಬ್ರ ಮತ್ತು ವಿದ್ಯುತ್ ಬಿಲ್ಲು ಹಾಜರುಪಡಿಸುವುದಕ್ಕೆ ರಿಯಾಯಿತಿ ನೀಡುವುದರೊಂದಿಗೆ ಮನೆ ನಿವೇಶವನ್ನು ಮಂಜೂರುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕೆ. ಜೀವಂಧರ್ ಜೈನ್, ರಾಜೇಶ್ ಬನ್ನೂರು, ಯಂ. ಚಂದ್ರಸಿಂಗ್, ಕೆ. ಸುಜೀಂದ್ರ ಪ್ರಭು, ವಿಶ್ವನಾತ ಗೌಡ, ಬಾಲಚಂದ್ರ ಮತ್ತು ವಿನಯ ಭಂಡಾರಿ ಉಪಸ್ಥಿತರಿದ್ದರು.





