ಪಿಯುಸಿ ಫಲಿತಾಂಶ: ರಾಜ್ಯಕ್ಕೆ ದ.ಕ. ಪ್ರಥಮ: ಹ್ಯಾಟ್ರಿಕ್ ಸಾಧನೆ

ಮಂಗಳೂರು, ಮೇ 25: ಶೈಕ್ಷಣಿಕವಾಗಿ ಮುಂದುವರಿದಿರುವ ಬುದ್ಧಿವಂತರ ಜಿಲ್ಲೆಯಂದೇ ಕರೆಯಲ್ಪಡುವ ದ.ಕ. ಜಿಲ್ಲೆ ಸತತ ಮೂರು ವರ್ಷಗಳಿಂದ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ.
2014ರಿಂದ 2016ರವರೆಗೆ ಸತತ ಮೂರು ಬಾರಿ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 2014ರಲ್ಲಿ ಶೇ. 86.04 ಫಲಿತಾಂಶ ಪಡೆದಿದ್ದ ದ.ಕ. ಜಿಲ್ಲೆ 2015ರಲ್ಲಿ ಶೇ. 93.09 ಫಲಿತಾಂಶವನ್ನು ದಾಖಲಿಸಿತ್ತು. ಇದೀಗ 2016ರಲ್ಲಿ ಶೇ. 90.48 ಫಲಿತಾಂಶವನ್ನು ಪಡೆದು ಪ್ರಥಮ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಶೇಕಡಾವಾರು ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಇಳಿಕೆ ಕಂಡುಬಂದಿದೆ. 2013ನೆ ಸಾಲಿನಲ್ಲಿ ದಕ್ಷಿಣ ಕನ್ನಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಪರಿಶ್ರಮ ಪಡುವ ವಿದ್ಯಾರ್ಥಿಗಳು ಹಾಗೂ ಬದ್ಧತೆಯಿಂದ ಕೂಡಿದ ಶಿಕ್ಷಕ ವರ್ಗವನ್ನೂ ಹೊಂದಿದೆ. ಇದರಿಂದಾಗಿ ನಿರಂತರವಾಗಿ ಪ್ರಥಮ ಸ್ಥಾನ ಪಡೆಯುವುದರಲ್ಲಿ ಯಾವುದೇ ಆಶ್ಚಯವಿಲ್ಲ. ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕ ಹಾಗೂ ವಿದ್ಯಾರ್ಥಿ ಮತ್ತು ಪೋಷಕ ವೃಂದದ ಸಾಂಘಿಕ ಪ್ರಯತ್ನವೂ ಈ ಅರ್ಹತೆಗೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.







