ಪಕ್ಷಕ್ಕೆ ‘ಕೈ’ ಕೊಡುವುದಿಲ್ಲ ಎಂದು ಶಾಸಕರಿಂದ ಅಫಿಡವಿಟ್ ಮಾಡಿಸಿದ ಕಾಂಗ್ರೆಸ್ !

ಕೊಲ್ಕತ್ತಾ : ಸ್ವಾರಸ್ಯಕರ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ 44 ಕಾಂಗ್ರೆಸ್ ಶಾಸಕರುಆಡಳಿತ ತೃಣಮೂಲ ಕಾಂಗ್ರೆಸ್ಸಿಗೆ ಪಕ್ಷಾಂತರಗೊಳ್ಳುವುದನ್ನು ತಡೆಯಲು ಅವರೆಲ್ಲರೂ ಅಫಿಡವಿಟ್ ಒಂದಕ್ಕೆ ಸಹಿ ಹಾಕುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಹ್ರಾಂಪುರ ಸಂಸದ ಅಧೀರ್ ಚೌಧುರಿ ಆದೇಶಿಸಿದ್ದರೆ.
ಬಂಗಾಳ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನವನ್ನು ಅಲಂಕರಿಸಲಿದ್ದರೆ, ‘ಮಮತಾ ಸುನಾಮಿ’ಯ ಪ್ರಭಾವದಿಂದ ಸಿಪಿಎಂ ಮೂರನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಈ ಹಿಂದೆ 42 ಸೀಟುಗಳನ್ನು ಹೊಂದಿದ್ದರೆ ಈ ಬಾರಿ ಇನ್ನೂ ಎರಡು ಹೆಚ್ಚು ಸೀಟುಗಳನ್ನುಗೆದ್ದಿದ್ದು ಪಕ್ಷದ ಮತ ಹಂಚಿಕೆ ಕೂಡ ಹಿಂದಿನ 9.6 ಶೇ.ದಿಂದ 12 ಶೇ. ಆಗಿದೆ. ಇದು ಸಂತಸ ಪಡುವ ವಿಷಯವಾದರೂ ಆಯ್ಕೆಗೊಂಡ ಪಕ್ಷ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ದೊಡ್ಡ ಸವಾಲನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧುರಿ ಎದುರಿಸುತ್ತಿದ್ದು ಅದಕ್ಕೆ ಅವರು ಕಂಡುಕೊಂಡ ಪರಿಹಾರವೇ ಶಾಸಕರು ಅಫಿಡವಿಟ್ ಗೆ ಸಹಿ ಹಾಕುವಂತೆ ಮಾಡುವುದು. ಹಿಂದೊಮ್ಮೆ ತೃಣಮೂಲ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ 2012ರಲ್ಲಿ ಒಡಕುಂಟಾದಾಗ ನಡೆದಂತೆ ಈ ಬಾರಿಯೂ ನಡೆಯಬಹುದೆಂಬ ಭಯ ಅವರಲ್ಲಿದೆ.
ನೂರು ರುಪಾಯಿ ಮೌಲ್ಯದ ಸ್ಟ್ಯಾಂಪ್ ಪೇಪರ್ ನಲ್ಲಿಎಲ್ಲಾ ಶಾಸಕರು ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ಆಡಳಿತ ತೃಣಮೂಲ ಕಾಂಗ್ರೆಸ್ಸಿಗೆ ಪಕ್ಷಾಂತರಗೈಯ್ಯುವುದಿಲ್ಲವೆಂದು ಘೋಷಣಾ ಪತ್ರಕ್ಕೆ ಸಹಿ ಹಾಕಿಸಲು ಅವರು ನಿರ್ಧರಿಸಿದ್ದಾರೆ.
ಸೋಮವಾರದಂದು ಚೌಧುರಿ ಪಶ್ಚಿಮ ಬಂಗಾಳ ರಾಜ್ಯಪಾಲ ಕೆ ಎನ್ ತ್ರಿಪಾಠಿಯವರನ್ನು ಸಂಪರ್ಕಿಸಿ ಬಂಗಾಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚುನಾವಣೋತ್ತರಹಿಂಸೆಯ ವಿರುದ್ಧ ದೂರಿದ್ದಾರೆ. ಮುಂದಿನ ವರ್ಷದ ಪಂಚಾಯತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ತೃಣಮೂಲ ಕಾಂಗ್ರೆಸ್ ವಿರುದ್ಧಅಭಿಯಾನಕ್ಕೂ ಅಣಿಯಾಗುತ್ತಿದ್ದಾರೆ.








