ಕೈಗಾರಿಕೆಗಳಲ್ಲಿ ಸಂಸ್ಕರಿಸಿದ ನೀರಿನ ಬಳಕೆ ಸಾಧ್ಯತೆ, ರೂಪುರೇಷೆ ಸಿದ್ಧಪಡಿಸಲು ಜಿಲ್ಲಾಧಿಕಾರಿ ನಿರ್ದೇಶನ

ಮಂಗಳೂರು, ಮೇ 25: ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ನೀರಿಗಾಗಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನೇತೃತ್ವದ ಜಿಲ್ಲಾಡಳಿತ, ಸಮುದ್ರ ಹಾಗೂ ನದಿಗಳಲ್ಲಿ ಲಭ್ಯವಿರುವ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸಲು ಆಸಕ್ತಿ ವ್ಯಕ್ತಪಡಿಸಿದೆ.
ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಪ್ರಮುಖ ಹಾಗೂ ಬೃಹತ್ ಕೈಗಾರಿಕೆಗಳ ಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳು ನೇತೃತ್ವದಲ್ಲಿ ಪ್ರಾಥಮಿಕ ಸಭೆ ನಡೆಸಿ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸುವ ಸಾಧ್ಯತೆ ಹಾಗೂ ಅಗತ್ಯತೆಗಳ ಬಗ್ಗೆ ರೂಪು ರೇಷೆಗಳನ್ನು ಸಿದ್ಧಪಡಿಸುವಂತೆ ಜಂಟಿ ನಿರ್ದೇಶಕರಿಗೆ (ಕೈಗಾರಿಕೆ) ಸೂಚಿಸಿದರು.
ಕೈಗಾರಿಕಾ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್‌ರನ್ನು ಈ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿ ನಿಯುಕ್ತಿ ಮಾಡಿರುವುದಾಗಿ ಸಭೆಯಲ್ಲಿ ತಿಳಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ವಿವಿಧ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೈಗಾರಿಕೆಗಳ ಪ್ರತಿನಿಧಿಗಳ ಸಹಕಾರದಲ್ಲಿ, ಮುಂದಿನ 20 ವರ್ಷಗಳ ಅವಧಿಗೆ ಕೈಗಾರಿಗೆಗಳ ನೀರಿನ ಬೇಡಿಕೆ, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಾಗೂ ಇತರ ತಾಂತ್ರಿಕ ಹಾಗೂ ಕಾನೂನು ವಿಚಾರಗಳ ಕುರಿತು ಒಂದು ತಿಂಗಳೊಳಗೆ ರೂಪು ರೇಷೆ ಸಿದ್ಧಪಡಿಸುವಂತೆ ನೋಡಲ್ ಅಧಿಕಾರಿಗೆ ಸಲಹೆ ನೀಡಿದರು.
ಉಪ್ಪು ನೀರನ್ನು ಸಂಸ್ಕರಣಾ ಘಟಕಗಳ ನಿರ್ಮಾಣದಲ್ಲಿ ದೇಶದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ದೇಶದ ಪ್ರಮುಖ ಸಂಸ್ಥೆಯಾಗಿರುವ ಐಯಾನ್ ಎಕ್ಸ್‌ಚೇಂಜ್ ಇಂಡಿಯಾ ಲಿಮಿಟೆಡ್‌ನ ಪ್ರತಿನಿಧಿ ಶ್ರೀಧರ್, ಸಂಸ್ಕರಣಾ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
1997ರಲ್ಲಿ ಸಂಸ್ಥೆಯು ಗುಜರಾತ್‌ನಲ್ಲಿ ಉಪ್ಪು ನೀರು ಸಂಸ್ಕರಣೆಯ ಪ್ರಥಮ ಘಟಕವನ್ನು ಆರಂಭಿಸಿದ್ದು, ಬಳಿಕದ ಸುಮಾರು 20 ವರ್ಷಗಳಲ್ಲಿ ಘಟಕದ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 10 ಎಂಎಲ್‌ಡಿ ನೀರು ಸಂಸ್ಕರಣೆಗೆ 1.8 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ಅವರು ಹೇಳಿದರು.
ಎಂಸಿಎಫ್‌ನ (ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್‌ನ) ನಿರ್ದೇಶಕ ಪ್ರಭಾಕರ ರಾವ್ ಮಾತನಾಡಿ, ಉಪ್ಪು ನೀರು ಸಂಸ್ಕರಣಾ ಘಟಕವೊಂದನ್ನು ಸ್ಥಾಪಿಸಲು 95ರಿಂದ 100 ಕೋಟಿ ರೂ. ವೆಚ್ಚ ತಗಲಲಿದ್ದು, ಕನಿಷ್ಠ 10 ಎಂಎಲ್‌ಡಿ ಸಂಸ್ಕರಣಾ ಘಟಕವನ್ನು ಆರಂಭಿಸಬೇಕಾಗುತ್ತದೆ ಎಂದರು.
ಇದಕ್ಕಾಗಿ ಪ್ರತ್ಯೇಕ ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ರಚನೆ ಮಾಡಿಕೊಳ್ಳುವ ಜತೆಗೆ, ಘಟಕವು ನೀರಿನ ಮೂಲದ ಸಮೀಪದಲ್ಲೇ ನಿರ್ಮಾಣ ಮಾಡುವುದು ಅಗತ್ಯಎಂದು ಅವರು ಹೇಳಿದರು.
ನಗರದ ಪ್ರಮುಖ ಕೈಗಾರಿಕೆಗಳಾದ ಎಂಆರ್‌ಪಿಎಲ್, ಎಸ್‌ಇಝೆಡ್, ಎಂಸಿಎಫ್ ಮೊದಲಾದ ಕೈಗಾರಿಕೆಗಳ ಪ್ರಸಕ್ತ ನೀರಿನ ಬೇಡಿಕೆ ಹಾಗೂ ಮುಂದಿನ 30 ವರ್ಷಗಳಿಗೆ ಅಗತ್ಯವಿರುವ ನೀರಿನ ಬೇಡಿಕೆ ಬಗ್ಗೆ ಲೆಕ್ಕಾಚಾರ ಮಾಡಿ ಸಮಗ್ರ ವರದಿಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿಯವರು ಗೋಕುಲ್‌ದಾಸ್ ನಾಯಕ್‌ಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್, ಡಿಸಿಪಿ ಡಾ. ಸಂಜೀವ್ ಪಾಟೀಲ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಮಧು ಶರ್ಮಾ, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಎನ್‌ಐಟಿಕೆಯ ಶ್ರೀನಿಕೇತನ್ ಮೊದಲಾದವರು ಉಪಸ್ಥಿತರಿದ್ದರು.
1000 ಲೀಟರ್ ಉಪ್ಪು ನೀರನ್ನು ಸಂಸ್ಕರಿಸಲು ನಿರ್ವಹಣಾ ವೆಚ್ಚ ಅಂದಾಜು 40 ರೂ. ಆಗಲಿದೆ. 20 ಎಂಎಲ್‌ಡಿ ಉಪ್ಪು ನೀರಿನ ಸಂಸ್ಕರಣಾ ಘಟಕ ನಿರ್ಮಾಣಕ್ಕೆ 10 ಎಕರೆ ಭೂಮಿ ಅಗತ್ಯ. ಘಟಕ ನಿರ್ಮಾಣಕ್ಕೆ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಬಳಿಕ 18ರಿಂದ 20 ತಿಂಗಳಲ್ಲಿ ಘಟಕ ನಿರ್ಮಾಣ ಮಾಡಬಹುದು.
- ಪ್ರಭಾಕರ ರಾವ್, ನಿರ್ದೇಶಕರು, ಎಂಸಿಎಫ್.







