ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಸಿದ್ಧಗೊಂಡ ಸಸಿಹಿತ್ಲು ಬೀಚ್

ಮಂಗಳೂರು, ಮೇ 25: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮೇ 27ರಿಂದ 29ರವರೆಗೆ ನಡೆಯಲಿರುವ ‘ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಮೇ 27ರಂದು ಬೆಳಗ್ಗೆ 9 ಗಂಟೆಗೆ ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸರ್ಫಿಂಗ್ ಸ್ಪರ್ಧೆಯನ್ನು ಉದ್ಘಾಟಿಸುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಅಂದು ಬೆಳಗ್ಗೆ 7.30ರಿಂದಲೇ ಸ್ಪರ್ಧೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಶನ್ ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಈ ಸ್ಪರ್ಧೆಯನ್ನು ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್‌ನ ಸಹಭಾಗಿತ್ವದಲ್ಲಿ ಮಂತ್ರ ಸರ್ಫ್ ಕ್ಲಬ್ ಆಯೋಜಿಸುತ್ತಿದೆ ಎಂದು ಅವರು ಹೇಳಿದರು.
ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಕಿಶೋರ್ ಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಲು ದೇಶದ ವಿವಿಧ ಕಡೆಗಳಿಂದ ಈಗಾಗಲೇ 85 ಸರ್ಫರ್‌ಗಳು ಆಲ್‌ಲೈನ್‌ಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಮತ್ತೆ 20ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬೆಳಗ್ಗೆ 7.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 12.45ರಿಂದ 3 ಗಂಟೆಯವರೆಗೆ ಸಮುದ್ರ ನೀರಿನ ಅಲೆಗಳ ಏರಿಳಿತವನ್ನು ಗಮನದಲ್ಲಿರಿಸಿಕೊಂಡು ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮೂರು ದಿನಗಳ ಅವಧಿಗೆ ವಸತಿ, ಸಾರಿಗೆ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಗೌರವ ನೀಡುವ ಉದ್ದೇಶದಿಂತ ಆಯಾ ವಿಭಾಗಗಳಿಗೆ ಸಂಬಂಧಿಸಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಇದಾಗಿದ್ದು, 16 ವರ್ಷದೊಳಗಿನ, ಜೂನಿಯರ್ ಯುವಕರು- 17ರಿಂದ 22, ಹಿರಿಯ ಪುರುಷರು 22ರಿಂದ 28, ಮಾಸ್ಟರ್ಸ್ ಪುರುಷರು 28 ಮತುತ ಮೇಲ್ಪಟ್ಟವರು ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತಾರಾಷ್ಟ್ರೀಯ ಸರ್ಫರ್‌ಗಳಿಗಾಗಿ ಮುಕ್ತ ಪುರುಷರ ವಿಭಾಗದಲ್ಲಿಯೂ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಶ್ಯದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ಅವರು ವಿವರ ನೀಡಿದರು.
ಸಸಿಹಿತ್ಲು ಬೀಚ್‌ನಲ್ಲಿ ಸ್ಥಳೀಯ ಮಹಿಳೆಯರ ವಿವಿಧ ಸಮುದ್ರ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಈಗಾಗಲೇ ಸರ್ಫರ್‌ಗಳು ಆಗಮಿಸಿ ಬೀಚ್‌ನ ಸಮುದ್ರ ಅಲೆಗಳಲ್ಲಿ ಸ್ಪರ್ಧೆಗೆ ಪೂರ್ವ ತಯಾರಿ ನಡೆಸಲು ಆರಂಭಿಸಿದ್ದಾರೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ತಿಳಿಸಿದರು.
ಸರ್ಫಿಂಗ್ ಸ್ಪರ್ಧಿಗಳಿಗೆ ನಾಲ್ಕು ಬಣ್ಣಗಳ ಟಿ ಶರ್ಟ್
ಸಮುದ್ರದ ನೀರಿನಲ್ಲಿ ವಿವಿಧ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವ ಸರ್ಫರ್‌ಗಳನ್ನು ಸುಲಭವಾಗಿ ಗುರುತಿಸುವ ನಿಟ್ಟಿನಲ್ಲಿ ನಾಲ್ಕು ಬಣ್ಣದ ಜೆರ್ಸಿ (ಟಿ ಶರ್ಟ್)ಗಳನ್ನು ತಯಾರಿಸಲಾಗಿದ್ದು, ಅದನ್ನು ಇಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅನಾವರಣಗೊಳಿಸಿದರು.
ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಜಂಟಿ ನಿರ್ದೇಶಕರು (ಕೈಗಾರಿಕೆ) ಗೋಕುಲ್‌ದಾಸ್ ನಾಯಕ್, ಮೂಡಾ ಆಯುಕ್ತ ನಝೀರ್, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು ಉಪಸ್ಥಿತರಿದ್ದರು.
ಈಜು ಬಲ್ಲ ಆಸಕ್ತ ವಿದ್ಯಾರ್ಥಿಗಳಿಗೆ ಸರ್ಫಿಂಗ್ ಬಗ್ಗೆ ತರಬೇತಿ
ಮೂರು ದಿನಗಳ ನಡೆಯಲಿರುವ ರಾಷ್ಟ್ರ ಮಟ್ಟದ ಸರ್ಫಿಂಗ್ ಸ್ಪರ್ಧೆಯ ಸಂದರ್ಭ ಸಸಿಹಿತ್ಲುವಿನ ಹಿನ್ನೀರಿನಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯ ಈಜು ಬಲ್ಲ ಶಾಲಾ ವಿದ್ಯಾರ್ಥಿಗಳಿಗೆ ಸರ್ಫಿಂಗ್ ಬಗ್ಗೆ ತರಬೇತಿ ಒದಗಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಗಾಗಿ 40 ಲಕ್ಷ ರೂ. ವೆಚ್ಚವಾಗಲಿದ್ದು, 25 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಒದಗಿಸುತ್ತಿದ್ದು, ಉಳಿದ ಹಣವನ್ನು ಪ್ರಾಯೋಜಕ ಸಂಸ್ಥೆಗಳು ಭರಿಸಲಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.
ಮುಕ್ಕದಿಂದ ಬೀಚ್‌ವರೆಗೆ ಉಚಿತ ಸಾರಿಗೆ ವ್ಯವಸ್ಥೆ
ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾಗೂ ವೀಕ್ಷಕರಿಗೆ ಅನುಕೂಲವಾಗುವಂತೆ ಮುಕ್ಕದ ಶ್ರೀನಿವಾಸ ಕಾಲೇಜಿನ ಪ್ರಮುಖ ಪ್ರವೇಶ ದ್ವಾರದ ಸಮೀಪದಿಂದ ಸಸಿಹಿತ್ಲು ಬೀಚ್‌ವರೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದರು.







