ಬಿಸಿಲ ಬೇಗೆ ತಡೆಯಲಾರದೆ ಸೂರ್ಯನ ವಿರುದ್ಧವೇ ಕೇಸು ಕೊಟ್ಟ ಭೂಪ!

ಹೊಸದಿಲ್ಲಿ, ಮೇ 25: ಮಧ್ಯಪ್ರದೇಶದಲ್ಲಿ ಸೂರ್ಯನ ತೀವ್ರ ಉಷ್ಣ ಕಿರಣಗಳಿಂದ ಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬರು ಸೂರ್ಯನ ವಿರುದ್ಧ ಕೋತ್‌ವಾಲಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಯಿ ದುನಿಯಾದ ವರದಿ ಪ್ರಕಾರ ಮಾರ್ಚ್ 20ರಂದು ಮೊದಲ ಬಾರಿ ಶಾಜಾಪುರು ಜಿಲ್ಲೆಯಲ್ಲಿ ತಾಪಮಾನ 47.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಉಷ್ಣದಿಂದ ಜನರು ಜೀವಜಂತುಗಳು ಪ್ರಭಾವಕ್ಕೊಳಗಾಗಿದ್ದರು. ಮರಗಿಡಗಳು ಕೂಡಾ ತೀಕ್ಷ್ಣ ಬಿಸಿಲಿನಿಂದ ಬಾಡಿಹೋಗಿದ್ದವು. ಇವುಗಳನ್ನು ಸಾಕ್ಷಿಯನ್ನಾಗಿಸಿ ರಾಜಾಪುರ ನಿವಾಸಿ ಶಿವಪಾಲ್ ಸಿಂಗ್"ಭಾಗ್ಯವಾನ್ ಬ್ರಹ್ಮಾಂಡ ನಿವಾಸಿಯಾದ ಸೂರ್ಯನಾರಾಯಣನ " ವಿರುದ್ಧ ಕೋತ್‌ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ರದಲ್ಲಿ ಹೀಗೆ ಬರೆಯಲಾಗಿದೆ.
ಇತಿ,
ಶ್ರೀಮಾನ್ ಠಾಣಾ ಪ್ರಭಾರಿ ಮಹೋದಯರೇ
ಕೋತ್‌ವಾಲಿ ಠಾಣೆ-ಶಾಜಾಪುರ(ಮಧ್ಯಪ್ರದೇಶ)
ವಿಷಯ: ಉರಿಯುತ್ತಿರುವ ಬಿಸಿಲಿನಿಂದ ಮಾನಸಿಕ ಮತ್ತು ಶಾರೀರಿಕ ಹಿಂಸೆಗೆ ಸಂಬಂಧಿಸಿದ್ದು
ಮಹೋದಯರೇ, ಮೇಲೆ ತಿಳಿಸಿದ ವಿಷಯದಲ್ಲಿ ನಿವೇದಿಸುವುದೇನೆಂದರೆ, ನಾನು ಶಿವಪಾಲ್ ಸಿಂಗ್, ಶಾಜಾಪುರ ನಿವಾಸಿ. ಒಂದು ವಾರದಿಂದ ಆಕಾಶದಿಂದ ಬೆಂಕಿ ಸುರಿಮಳೆಯಾಗುತ್ತಿದೆ ಆದ್ದರಿಂದ ಮಾನಸಿಕ ಹಾಗೂ ಶಾರೀರಿಕ ರೂಪದಲ್ಲಿ ಕಷ್ಟ ಸಹಿಸಬೇಕಾಗಿದೆ. ಇದಕ್ಕೆ ಕಾರಣನಾದ ಬ್ರಹ್ಮಾಂಡ ನಿವಾಸಿ ಸೂರ್ಯ ನಾರಾಯಣನ ವಿರುದ್ಧ ಭಾರತ ಸಂವಿಧಾನದ ಅನುಸಾರ ಅವಶ್ಯಕ ಕಾನೂನು ಕಲಂನಡಿ ಕ್ರಮ ಕೈಗೊಂಡು ನನಗೆ ಹಾಗೂ ಜನಮಾನಸಕ್ಕೆ ಸಾಂತ್ವನ ಒದಗಿಸಬೇಕೆಂದು ವಿನಂತಿಸುತ್ತಿದ್ದೇನೆ.
ಕಳೆದ ಒಂದು ವಾರದಿಂದ ಶ್ರೀಮಾನ್ ಸೂರ್ಯನಾರಯಣ ತನ್ನ ಮಿತಿಯನ್ನು ಮೀರಿ ಜೀವಿಗಳು ಜೀವಿಸುವುದನ್ನು ದುಷ್ಕರಗೊಳಿಸಿದ್ದಾನೆ. ಮೂಕ ಪಶು,ಪಕ್ಷಿ ದಯಾನೀಯ ಸ್ಥಿತಿಯಲ್ಲಿವೆ. ಮರಗಿಡಗಳು ಉರಿದುಹೋಗುವ ಸ್ಥಿತಿಯಲ್ಲಿರುವುದನ್ನು ಸಾಕ್ಷ್ಯದ ರೂಪದಲ್ಲಿ ತಮ್ಮ ಮುಂದಿರಿಸುತ್ತೇನೆ. ಪ್ರಾರ್ಥನೆಯೇನೆಂದರೆ ಸದ್ಭಾವ ಪೂರ್ವಕವಾಗಿ ವಿಚಾರಿಸಿ ಶಿಕ್ಷಾಪ್ರಕ್ರಿಯೆ ಸಂಹಿತೆ 1973ರ ಕಲಂ 154ರ ಪ್ರಕಾರ ದೂರನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತಿದ್ದೇನೆ.
ವಿನಯ ಪೂರ್ವಕ, ಇತಿ, ಶಿವಪಾಲ ಸಿಂಗ್







