ರಾಜಸ್ಥಾನ: ಶಿವಮಂದಿರದಿಂದ 11 ರೂ.ಗೆ ಪಾಪ ಮುಕ್ತ ಪ್ರಮಾಣ ಪತ್ರ!

ಉದಯಪುರ, ಮೇ 25: ರಾಜಸ್ಥಾನದ ಶಿವಮಂದಿರವೊಂದು, ಕುಂಡದಲ್ಲಿ ಮುಳುಗು ಹಾಕಿದ ವ್ಯಕ್ತಿಗೆ ಪಾಪ ಮುಕ್ತ ಎಂಬ ಪ್ರಮಾಣ ಪತ್ರ ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಈ ಪ್ರಮಾಣಪತ್ರ ಪಡೆಯಬೇಕಾದರೆ ಶುಲ್ಕವನ್ನೂ ಪಾವತಿಸಬೇಕಾಗಿದೆ. ಪ್ರತಾಪಗಡ ಜಿಲ್ಲೆಯಲ್ಲಿ ಗೌತಮೇಶ್ವರ ಮಹಾದೇವ ಪಾಪಮೋಚನ ತೀರ್ಥ ಹೆಸರಿನ ದೇವಸ್ಥಾನವಿದೆ. ಯಾರೇ ಆದರೂ ಇಲ್ಲಿರುವ ಮಂದಾಕಿನಿ ಕುಂಡದಲ್ಲಿ ಮುಳುಗು ಹಾಕಿ 11ರೂ. ಪಾವತಿಸಿ ‘ಪಾಪಮುಕ್ತ’ ಪ್ರಮಾಣಪತ್ರವನ್ನು ಪಡೆದು ಕೊಳ್ಳಬಹುದಾಗಿದೆ.
ದೇಶಕ್ಕೆ ಸ್ವಾತಂತ್ರ ಲಭಿಸಿದಾಗಿನಿಂದ ಮಂದಾಕಿನಿ ಕುಂಡದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಮಾಣಪತ್ರವನ್ನು ಪಡೆದುಕೊಂಡವರ ದಾಖಲೆಯನ್ನು ಕಾಯ್ದುಕೊಂಡಿರುವುದಾಗಿ ದೇವಸ್ಥಾನವು ಹೇಳಿಕೊಂಡಿದೆ. ‘ಅಮಿನತ್ ಕಚ್ಚಾರಿ’ ಹೆಸರಿನ ಅರ್ಚಕರ ಮಂಡಳಿಯು ಪ್ರತಿ ಪ್ರಮಾಣಪತ್ರಕ್ಕೆ ಒಂದು ರೂ.ಶುಲ್ಕವನ್ನು ವಿಧಿಸುತ್ತದೆ ಮತ್ತು ದೋಷ ನಿವಾರಣೆಗಾಗಿ 10 ರೂ.ಪಾವತಿಸಬೇಕಾಗುತ್ತದೆ. ತಮ್ಮ ಗ್ರಾಮಗಳಲ್ಲಿ ಬಹಿಷ್ಕಾರಕ್ಕೊಳಗಾದವರು ಇಲ್ಲಿಗೆ ಬಂದು ಕುಂಡದಲ್ಲಿ ಮುಳುಗು ಹಾಕಿ ‘ಪಾಪಮುಕ್ತ’ ಪ್ರಮಾಣಪತ್ರದೊಂದಿಗೆ ಮರಳುತ್ತಾರೆ ಎಂದು ಅರ್ಚಕ ನಂದಕಿಶೋರ ಶರ್ಮಾ ತಿಳಿಸಿದರು.
ಈ ಕ್ಷೇತ್ರವು ಶತಮಾನಗಳಿಂದಲೂ ’ಗಿರಿಜನರ ಹರಿದ್ವಾರ’ ಎಂದೇ ಹೆಸರಾಗಿದೆ. ನೂರಾರು ವರ್ಷಗಳಿಂದಲೂ....ವಿಶೇಷವಾಗಿ ಬುಡಕಟ್ಟು ಸಮುದಾಯದ ಪಾಲಿಗೆ ಇದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ ನಡೆಯುವ ಗೌತಮೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆಯಾದರೂ ಈ ದಿನಗಳಲ್ಲಿ ‘ಪಾಪಮುಕ್ತ’ ಪ್ರಮಾಣಪತ್ರವನ್ನು ಬಯಸುವವರ ಸಂಖ್ಯೆ ಕಡಿಮೆಯಾಗಿದೆ. ಈ ತಿಂಗಳಲ್ಲಿ ನಡೆದ ಜಾತ್ರೆಯ ಸಂದರ್ಭ ಎರಡು ಲಕ್ಷಕ್ಕೂ ಅಧಿಕ ಭಕ್ತರು ಮಂದಾಕಿನಿ ಕುಂಡದಲ್ಲಿ ಸ್ನಾನ ಮಾಡಿದ್ದರಾದರೂ ಪ್ರಮಾಣಪತ್ರ ಪಡೆದುಕೊಂಡವರ ಸಂಖ್ಯೆ ಮೂರು ಮಾತ್ರ.
ಪ್ರಾಣಿಯೊಂದರ ಸಾವಿಗೆ ಕಾರಣನಾಗಿದ್ದಕ್ಕೆ ಶಾಪಗ್ರಸ್ತನಾಗಿದ್ದ ಗೌತಮ ಋಷಿಯು ಇಲ್ಲಿಯ ಕುಂಡದಲ್ಲಿ ಸ್ನಾನ ಮಾಡಿ ಶಾಪಮುಕ್ತನಾಗಿದ್ದ ಎಂದು ಐತಿಹ್ಯವೊಂದು ಹೇಳುತ್ತದೆ. ಅಲ್ಲಿಂದೀಚೆಗೆ ಇಲ್ಲಿ ಪವಿತ್ರ ಸ್ನಾನದ ಸುದೀರ್ಘ ಸಂಪ್ರದಾಯವು ಅನೂಚಾನವಾಗಿ ನಡೆದುಕೊಂಡು ಬಂದಿದೆ.
ರೈತರು ಕೃಷಿಯ ಸಂದರ್ಭದಲ್ಲಿ ಅನುದ್ದಿಷ್ಟವಾಗಿ ಕ್ರಿಮಿಕೀಟಗಳು,ಇತರ ಜಂತುಗಳ ಸಾವಿಗೆ ಕಾರಣರಾಗುತ್ತಾರೆ. ಪಕ್ಷಿಗಳು ಮತ್ತು ಸರೀಸೃಪಗಳ ಮೊಟ್ಟೆಗಳು ನಾಶವಾಗುತ್ತವೆ. ಇದು ಅವರಲ್ಲಿ ತಪ್ಪಿನ ಭಾವನೆಯನ್ನು ಮೂಡಿಸಿರುತ್ತದೆ. ಭಾರವಾದ ಹೃದಯದೊಂದಿಗೆ ಇಲ್ಲಿಗೆ ಬರುವ ಅವರು ಪವಿತ್ರ ಸ್ನಾನದ ಬಳಿಕ ನಿರಾಳರಾಗಿ ಮರಳುತ್ತಾರೆ ಎಂದು ಇನ್ನೋರ್ವ ಅರ್ಚಕ ಕನ್ಹೈಯಾಲಾಲ್ ಶರ್ಮಾ ಹೇಳಿದರು.







