ರಾಜ್ಯ ಸಾರಿಗೆ ದೇಶಕ್ಕೆ ಮಾದರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಚತುರ ಸಾರಿಗೆ ವ್ಯವಸ್ಥೆ’ಯ ಲೋಕಾರ್ಪಣೆ

ಬೆಂಗಳೂರು, ಮೇ 25: ಕರ್ನಾಟಕ ಸಾರಿಗೆ ಸಂಸ್ಥೆಯು ಇಡೀ ದೇಶಕ್ಕೆ ಮಾದರಿಯಾಗಿದ್ದು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಇಲ್ಲಿನ ಶಾಂತಿನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ‘ಚತುರ ಸಾರಿಗೆ ವ್ಯವಸ್ಥೆ’ಯ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ, ಬಿಎಂಟಿಸಿ ದೇಶದ ಬಹುದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಬೆಂಗಳೂರಿನಲ್ಲಿ 51 ಲಕ್ಷ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಮಹತ್ವದ ಸಾರಿಗೆಯ ಬೆಳವಣಿಗೆಗಾಗಿ ರಾಜ್ಯ ಸರಕಾರ ಹೆಚ್ಚು ಅನುದಾನ ನೀಡಿ ಪ್ರೋತ್ಸಾಹಿಸಿದೆ ಎಂದು ಹೇಳಿದರು.
ಸಿಲಿಕಾನ್ ಸಿಟಿ ಬೆಂಗಳೂರು 800 ಚದರ ಕಿ.ಮೀಟರ್ ವಿಸ್ತೀರ್ಣ ಹೊಂದಿದೆ. ಇಂತಹ ಮಹಾನಗರಕ್ಕೆ ಸೂಕ್ತ ಸೌಲಭ್ಯ ನೀಡುವ ಜೊತೆಗೆ ಸಂಚಾರ ದಟ್ಟಣೆ, ಕಸವಿಲೇವಾರಿ ಸೇರಿ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರ ಮುಂದಾಗಲಿದೆ ಎಂದ ಅವರು, ರಾಜ್ಯ ಸಾರಿಗೆಯಲ್ಲಿ ಲಾಭ ಬರುತ್ತದೆ ಎಂಬ ದೃಷ್ಟಿಕೋನವಿಲ್ಲ. ಹಾಗಂತ ನಷ್ಟದಲ್ಲಿಯೂ ಇದನ್ನು ನಡೆಸುವುದಿಲ್ಲ ಎಂದರು.
ಚತುರ ಸಾರಿಗೆ ವ್ಯವಸ್ಥೆ ಕುರಿತು ಮಾತನಾಡಿದ ಸಿಎಂ, ರಾಜ್ಯ ಸಾರಿಗೆ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಂತಹ ನೂತನ ವ್ಯವಸ್ಥೆಯಿಂದ ಸಿಬ್ಬಂದಿಯ ಶಿಸ್ತನ್ನು ಸರಿಪಡಿಸಬಹುದು ಹಾಗೂ ಪ್ರಯಾಣಿಕರಿಗೆ ಸುಲಭವಾಗಿ ಮಾಹಿತಿ ಒದಗಿಸಬಹುದಾಗಿದೆ ಎಂದು ಹೇಳಿದರು.
ನಗರದಲ್ಲಿ ಮೆಟ್ರೋ ಸಂಚಾರದಿಂದ ಬಿಎಂಟಿಸಿಯ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ. ದ್ವಿಚಕ್ರ, ಆಟೋರಿಕ್ಷಾ ಹಾಗೂ ಕಾರಿನಲ್ಲಿ ಸಂಚಾರ ಮಾಡುವ ಸಂಖ್ಯೆ ಕಡಿಮೆಯಾಗಿದೆ ಎಂದ ಅವರು, ಮೊದಲನೆ ಹಂತದ 13,800 ಕೋಟಿ ರೂ. ವೆಚ್ಚಗಳ 42 ಕಿ.ಮೀಟರ್ ಮೆಟ್ರೋ ಕಾಮಗಾರಿ ನಂವಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಯಾಣಿಕರಿಗೆ ಆಗುತ್ತಿರುವ ಹಲವಾರು ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನದೊಂದಿಗೆ ಚತುರ ಸಾರಿಗೆಯನ್ನು ಪರಿಚಯಿಸುತ್ತಿದ್ದು, 6500 ಬಸ್‌ಗಳಿಗೆ ಈ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಹೇಳಿದರು.
ಈ ತಂತ್ರಜ್ಞಾನದಿಂದ ಎಲ್ಲಿ, ಯಾವ ಸಮಯಕ್ಕೆ ಯಾವ ಮಾರ್ಗದ ಬಸ್‌ಗಳು ಸಂಚರಿಸುತ್ತವೆ ಎಂಬ ಬಗ್ಗೆ ಪ್ರಯಾಣಿಕರು ಮಾಹಿತಿ ಪಡೆಯಲು ಸುಲಭವಾಗಿದ್ದು, ಬಸ್ ಸಂಚಾರದ ಮೇಲೂ ನಿಗಾವಹಿಸಲು ಸಾಧ್ಯವಿದೆ. ಇದು ಜಿಪಿಎಸ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಪ್ರತಿ 10 ಸೆಕೆಂಡ್‌ಗಳಿಗೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ ಎಂದು ವಿವರಿಸಿದರು.
ಬಿಎಂಟಿಸಿ ಮೊಬೈಲ್ ಆಪ್ ಕೂಡ ಅಭಿವೃದ್ದಿಪಡಿಸಲಾಗಿದ್ದು, ಇದರಿಂದ ಸಾಕಷ್ಟು ಉಪಯೋಗವಿದೆ. 35 ಬಸ್ ನಿಲ್ದಾಣಗಳಲ್ಲಿ ಪಿಐಎಸ್ ಅಳವಡಿಸಲಾಗಿದ್ದು, ಬಸ್ ನಿಲ್ದಾಣಕ್ಕೆ ಯಾವ ಮಾರ್ಗದ ಬಸ್ ಯಾವ ಸಮಯದಲ್ಲಿ ಬರುತ್ತವೆ, ಎಷ್ಟು ಬಸ್ ಬರುತ್ತವೆ, ಎಲ್ಲಿಗೆ ಹೋಗುತ್ತವೆ ಎಂಬ ಮಾಹಿತಿಯನ್ನು ಒದಗಿಸುತ್ತದೆ. ಈ ಸಿಸ್ಟಮ್‌ನಲ್ಲಿ ಐದು ನಿಮಿಷ, 15 ನಿಮಿಷ ಹಾಗೂ 60 ನಿಮಿಷಕ್ಕೆ ಬರುವ ಬಸ್‌ಗಳ ಮಾಹಿತಿವಿದ್ದು, ಇಟಿಎಂ ಮೂಲಕ ಪ್ರತಿ ಐದು ನಿಮಿಷಕ್ಕೊಮ್ಮೆ ಎಷ್ಟು ಟಿಕೆಟ್ ನೀಡಲಾಗುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 5 ಸಾವಿರ ಬಸ್‌ಗಳಲ್ಲಿ ಈ ಸೇವೆ ಅಳವಡಿಸಲಾಗುತ್ತದೆ. ತದನಂತರ ಹಂತ ಹಂತವಾಗಿ ಉಳಿದ ಬಸ್‌ಗಳನ್ನು ಈ ಸೇವೆ ಅಳವಡಿಸಲಾಗುವುದು. ಸ್ಮಾರ್ಟ್ ಕಾರ್ಡ್‌ಗಳನ್ನು ಜಾರಿಗೊಳಿಸುವ ಉದ್ದೇಶವಿದ್ದು, ಪ್ರಯಾಣಿಕರು ನಗದು ರಹಿತ ಟಿಕೆಟ್ ಖರೀದಿಸ ಬಹುದಾಗಿದೆ. ಇದರಿಂದ ಚಿಲ್ಲರೆ ಸಮಸ್ಯೆ ದೂರಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥ್‌ರೆಡ್ಡಿ, ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಗೋವಿಂದ ರಾಜು, ಬಿಎಂಟಿಸಿ ನಿರ್ದೇಶಕರಾದ ಏಕ್‌ರೂಪ್ ಕೌರ್, ಬಿಎಂಟಿಸಿ ಅಧ್ಯಕ್ಷ ಎಚ್.ನಾಭಿರಾಜ ಜೈನ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.







