ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕಿದೆ:
ಜಯಂತ್ಯುತ್ಸವ, ಜನಾಂಗದ ಜಾಗೃತಿ ಸಮಾವೇಶ

ಕಡೂರು, ಮೇ 25: ಕಾಯಕದ ಆಧಾರದ ಮೇಲೆ ಬದುಕುತ್ತಿರುವ ಎಲ್ಲ ರೀತಿಯಲ್ಲೂ ಅತಿ ಹಿಂದುಳಿದ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕಿದೆ. ಇದಕ್ಕಾಗಿ ಸಮಾಜ ಒಗ್ಗಟ್ಟಾಗಬೇಕಿದೆ ಎಂದು ಚಿತ್ರದುರ್ಗದ ಬಸವ ಮಾಚಿದೇವಸ್ವಾಮಿ ತಿಳಿಸಿದರು. ಅವರು ಕಡೂರು ತಾಲೂಕು, ಮಡಿವಾಳ ಮಾಚಿದೇವ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಗುರುವೀರ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಮತ್ತು ಜನಾಂಗದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ದುಡಿದು ತಿನ್ನುವ ಪ್ರಾಮಾಣಿಕ ಸಮಾಜ ಇದಾಗಿದ್ದು, ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯ ನೀಡುವುದಾದರೆ ಈ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಸರಕಾರದ ಸೌಲಭ್ಯ ಪಡೆಯಲು ಸಮಾಜ ಜಾಗೃತಗೊಳ್ಳಬೇಕಿದೆ. ಈ ಸಮಾಜಕ್ಕೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಪರಿಶಿಷ್ಟ ಜಾತಿಗೆ ಸೇರುವುದು ರಾಜಕೀಯ ಹುದ್ದೆಗಳನ್ನು ಸ್ವೀಕರಿಸಲು ಅಲ್ಲ. ಸರಕಾರದ ಸೌಲಭ್ಯಗಳನ್ನು ಪಡೆಯಲು ಮಾತ್ರ. ಸ್ವಾಭಿಮಾನಿಗಳ ಸಮಾಜ ಇದಾಗಿದ್ದು, ದೌರ್ಜನ್ಯದ ವಿರುದ್ಧ ಸಮಾಜ ಒಗ್ಗಟ್ಟಾಗಬೇಕಿದೆ. ಪ್ರತಿಯೊಬ್ಬರಲ್ಲೂ ಸಂಸ್ಕಾರ ಮೂಡಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಶಾಸಕ ವೈ.ಎಸ್.ವಿ. ದತ್ತ ಉದ್ಘಾಟಿಸಿ ಮಾತನಾಡಿ, ಮಡಿವಾಳ ಸಮಾಜ ಸೇರಿಕೊಂಡಂತೆ ಸಣ್ಣ ಸಣ್ಣ ಜನಾಂಗದವರನ್ನು ಸೇರಿಸಿಕೊಂಡು ಬಸವಣ್ಣನವರು 12ನೆ ಶತಮಾನದಲ್ಲಿ ಕ್ರಾಂತಿ ಮಾಡಿದರು. ಪುರೋಹಿತಶಾಹಿ, ಬಹುಸಂಖ್ಯಾತರ ವಿರುದ್ಧ ಬಸವಣ್ಣನವರು ಮಡಿವಾಳ ಮಾಚಯ್ಯನವರು ಸೇರಿದಂತೆ ಅನೇಕ ಶರಣರು ಹೋರಾಟ ನಡೆಸಿದರು. ಬಸವಣ್ಣನವರು ಮಾಚಿದೇವರಿಗೆ ಅಂಜುತ್ತಿದ್ದರು. ತಪ್ಪಾಗಿ ನಡೆದುಕೊಂಡರೆ ಮಾಚಿದೇವರ ಮೇಲಾಣೆ ಎನ್ನುತ್ತಿದ್ದರು. ಬಸವಣ್ಣ, ಮಾಚಿದೇವರು ಕಾಯಕ ನಿಷ್ಠೆಯುಳ್ಳವರಾಗಿದ್ದರು. ನೈತಿಕತೆಯ ದೃಷ್ಟಿಯಿಂದ ಈ ಸಮಾಜಕ್ಕೆ ಮಾನ್ಯತೆ ನೀಡಬೇಕಿದೆ. ಈಗಾಗಲೇ ಯಗಟಿ ಮಡಿವಾಳ ಸಮುದಾಯ ಭವನಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗಿದೆ. ಹೊಗರೇಹಳ್ಳಿ ಸಮುದಾಯ ಭವನಕ್ಕೆ 1 ಲಕ್ಷ ರೂ. ನೀಡಲಾಗಿದೆ. ಮಡಿವಾಳ ಸಮಾಜದವರಿಗೆ ಸಮುದಾಯ ನಿರ್ಮಾಣ ಮಾಡಲು ಹರುವನಹಳ್ಳಿ ಸಮೀಪ ನಿವೇಶನ ನೀಡುವುದಲ್ಲದೆ, ಶಾಸಕರು ಮತ್ತು ಲೋಕಸಭಾ ಸದಸ್ಯರ ಅನುದಾನವನ್ನು ನೀಡಲಾಗುವುದೆಂದು ಹೇಳಿದರು. ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಧರ್ಮೇಗೌಡ, ಸಮಾಜದ ಮುಖಂಡ ಆರ್. ರಘು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನೆರವೇರಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಬೆಳ್ಳಿಪ್ರಕಾಶ್, ಕೆ.ಎಂ.ಕೆಂಪರಾಜು, ಜಿಪಂ ಸದಸ್ಯರಾದ ಮಹೇಶ್ ಒಡೆಯರ್, ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ, ವಿಜಯ್‌ಕುಮಾರ್, ಎಪಿಎಂಸಿ ಅಧ್ಯಕ್ಷ ಎಂ.ರಾಜಪ್ಪ, ತಾಪಂ ಅಧ್ಯಕ್ಷತೆ ರೇಣುಕಾ ಉಮೇಶ್, ಪುರಸಭಾ ಅಧ್ಯಕ್ಷೆ ಅನಿತಾ, ಕೆ.ಎಸ್. ಆನಂದ್, ಭಂಡಾರಿ ಶ್ರೀನಿವಾಸ್, ಹೂವಿನ ಗೋವಿಂದಪ್ಪ ಉಪಸ್ಥಿತರಿದ್ದರು.





