ಜಾಗತಿಕ ತಾಪಮಾನ, ಭಯೋತ್ಪಾದನೆ ಪ್ರಪಂಚದ ಕಂಟಕಗಳು: ಡಿ.ಎಸ್.ರವಿ

ಚಿಕ್ಕಮಗಳೂರು, ಮೇ 25: ಜಾಗತಿಕ ತಾಪಮಾನ ಮತ್ತು ಭಯೋತ್ಪಾದನೆ ಪ್ರಪಂಚದ ಎರಡು ಕಂಟಕಗಳು. ಪರಸ್ಪರ ಪ್ರೀತಿ, ಮಾನವೀಯತೆ, ಸೇವೆ, ಸಹಕಾರ, ಸಹಬಾಳ್ವೆಯ ರೋಟರಿ ಆಂದೋಲನ ಗಟ್ಟಿಗೊಳಿಸುವ ಮೂಲಕ ಶಾಂತಿ ಸೌಹಾರ್ದತೆ ಬಿತ್ತಬಹುದು ಎಂದು ರೋಟರಿ 3,182 ಪ್ರಥಮ ಜಿಲ್ಲಾ ಚುನಾಯಿತ ಅಧ್ಯಕ್ಷ ಮೂಡಿಗೆರೆ ಡಿ.ಎಸ್.ರವಿ ಹೇಳಿದ್ದಾರೆ.
ಅವರು ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ 2ದಿನಗಳ ರೋಟರಿ ನಾಯಕರ ಪ್ರಥಮ ತರಬೇತಿ ಅಧಿವೇಶನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಪ್ರಪಂಚದಾದ್ಯಂತ ಪಸರಿಸಿರುವ ರೋಟರಿಕ್ಲಬ್‌ಗಳು ಮಾನವೀಯ ಸೇವೆ ಹಾಗೂ ವೃತ್ತಿಕೌಶಲ್ಯ ಹೆಚ್ಚಿಸಲು ಪ್ರಯತ್ನಿಸುತ್ತಿವೆ. 8ಕಂದಾಯ ಜಿಲ್ಲೆಗಳಲ್ಲಿ 146 ಕ್ಲಬ್‌ಗಳನ್ನು ಹೊಂದಿದೆ ಎಂದರು.
ರೋಟರಿ ಸಂಸ್ಥೆಯ ಪ್ರತಿ ಸದಸ್ಯರು ರೋಟರಿ ಫೌಂಡೇಷನ್‌ಗೆ ದೇಣಿಗೆ ನೀಡುವ ಮೂಲಕ ಸೇವಾಕಾರ್ಯದಲ್ಲಿ ತೊಡಗಬೇಕು. ಸ್ವಚ್ಛತಾ ಆಂದೋಲನ, ಶಿಕ್ಷಣ ಸಬಲೀಕರಣ, ರೈತಮಿತ್ರ, ಮಳೆಕೊಯ್ಲು ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಮೈಸೂರಿನ ಅಂತಾರಾಷ್ಟ್ರೀಯ ತರಬೇತುದಾರ ಎಂ.ಎಸ್.ರಘು ಮಾತನಾಡಿ, ನಿಮ್ಮ ಯಶಸ್ಸಿಗೆ ಖುಷಿಪಡಿ, ಇನ್ನೊಬ್ಬರ ಯಶಸ್ಸನ್ನು ಕೊಂಡಾಡಿ ಆಗ ಸಿಗುವ ಸಂತೋಷವೇ ಬೇರೆ. ಮತ್ತೊಬ್ಬರ ಒಳಿತನ್ನು ಪ್ರೋತ್ಸಾಹಿಸುವುದರಿಂದ ನಮ್ಮಲ್ಲೂ ಉತ್ಸಾಹ ಹೆಚ್ಚುತ್ತದೆ. ಎಲ್ಲ ಸಮಸ್ಯೆಗಳಿಗೂ ನಗುವಿನಲ್ಲಿ ಉತ್ತರ ಕಂಡುಕೊಳ್ಳಬಹುದು. ನಮ್ಮ ಕೆಲಸದಲ್ಲಿ ಭಾವನೆ ತುಂಬಿದರೆ ಪರಿಣಾಮ ಅತ್ಯುತ್ತಮವಾಗಿರುತ್ತದೆ ಎಂದರು. ರೋಟರಿ ಜಿಲ್ಲಾ 3,180 ರಾಜ್ಯಪಾಲ ಡಾ.ಎ.ಭರತೇಶ್, ಪಿಡಿಜಿ ಡಾ. ನಾರಾಯಣ, ಡಾ. ಗುರುರಾಜ್, ಅಭಿನಂದನಾಶೆಟ್ಟಿ, ಜಿ.ಎನ್.ಪ್ರಕಾಶ್‌ಮಾತನಾಡಿದರು.
ಈ ಸಂದರ್ಭದಲ್ಲಿ ಅಧಿವೇಶನ ಸಮಿತಿ ಅಧ್ಯಕ್ಷ ಡಿ.ಎಚ್.ನಟರಾಜ್, ಉಪಾಧ್ಯಕ್ಷ ರಾಕೇಶ್, ಸಹಾಯಕ ಗೌರ್ನರ್ ಎಂ.ಆರ್.ಕಿರಣ್, ಕ್ಲಬ್ ಕಾರ್ಯದರ್ಶಿ ಗೌತಮಚಂದ್‌ಸಿಯಾಲ್ ಉಪಸ್ಥಿತರಿದ್ದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಜಿ.ಚೆಂದಿಲ್‌ಕುಮಾರ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಮೂಡಿಗೆರೆ ವಿವೇಕಪುಣ್ಯಮೂರ್ತಿ ವಂದಿಸಿದರು.







