‘112 ಎಪಿಎಂಸಿಗಳಲ್ಲಿ ಧಾನ್ಯ ಬೇರ್ಪಡಿಸುವ ಯಂತ್ರ ಅಳವಡಿಕೆ’

ದಾವಣಗೆರೆ,ಮೇ 25: ರಾಜ್ಯದ 112 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಧಾನ್ಯ ಬೇರ್ಪಡಿಸುವ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲ ಎಪಿಎಂಸಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 250 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 110 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಅಭಿವೃದ್ಧ್ದಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಧಾನ್ಯಗಳನ್ನು ಬೇರ್ಪಡಿಸುವ ಯಂತ್ರವನ್ನು 5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. ಜಾನುವಾರುಗಳಿಗೆ ಪ್ರಾಂಗಣದ ಸುಸಜ್ಜಿತವಾದ ವ್ಯವಸ್ಥೆ ಮಾಡುವ ಸಲುವಾಗಿ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬೆಳೆ ತೂಕದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಇಲೆಕ್ಟ್ರಾನಿಕ್ ಯಂತ್ರವನ್ನು ಅಳವಡಿಸಲಾಗುವುದು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು. ಎಪಿಎಂಸಿಯಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುವುದು ಎಂದರು. ರೈತರು ಬೆಳೆದಂತಹ ಬೆಳೆಗಳನ್ನು ಕುಳಿತಲ್ಲೇ ಆನ್ ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ. ಆನ್‌ಲೈನ್ ವ್ಯಾಪಾರದಿಂದ ರೈತರಿಗೆ ಯಾವುದೇ ಮೋಸವಾಗುವುದಿಲ್ಲ. ರೈತರಿಗೆ ಬೆಂಬಲ ಬೆಲೆ ಕಡಿಮೆಯಾದಾಗ ಬೆಂಬಲ ಬೆಲೆ ಕೊಡುವುದಕ್ಕಾಗಿ ಹಣವನ್ನು ಮುಡಿಪಾಗಿಡಲಾಗಿದೆ. ಎಪಿಎಂಸಿ ಅಧ್ಯಕ್ಷ ಎಸ್. ಕೆ. ಚಂದ್ರಶೇಖರ್, ಉಪಾಧ್ಯಕ್ಷ ಪಿ.ಕೆ. ರಾಜೇಂದ್ರ, ಎಸ್. ಶಿವಮೂರ್ತಿ, ಕಿರುವಾಡಿ ವಿ. ಸೋಮಶೇಖರ್, ಎಪಿಎಂಸಿ ಸದಸ್ಯ ಎಂ.ಜಿ. ಪುಟ್ಟಸ್ವಾಮಿ, ಶಿವಕುಮಾರ್ ಎ. ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.





