ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ
ಬೆಂಗಳೂರು, ಮೇ 25: ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ(ಶೇ.90.48) ಪ್ರಥಮ, ಉಡುಪಿ(ಶೇ.90.35) ದ್ವಿತೀಯ ಸ್ಥಾನ ಪಡೆದಿದ್ದು, ಈ ಬಾರಿಯೂ ಬಾಲಕಿಯರು ಶೇ.64.78ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.
ಶೇ.57.20ರಷ್ಟು ಫಲಿತಾಂಶ: ಪಿಯು ಪರೀಕ್ಷಾ ಮಂಡಳಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿ ನಡೆಸಿ, ಪಿಯು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ.57.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ.3ರಷ್ಟು ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಹೆಚ್ಚು ವಿದ್ಯಾರ್ಥಿಗಳು ಪ್ರಥಮ ದರ್ಜೆ: ಪಿಯು ಪರೀಕ್ಷೆಯಲ್ಲಿ 3,64,013ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 41,373 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 1,89,791 ವಿದ್ಯಾರ್ಥಿಗಳು ಪ್ರಥಮ ದರ್ಜೆ, 78,301 ವಿದ್ಯಾರ್ಥಿಗಳು ದ್ವಿತೀಯ ಹಾಗೂ 54, 548 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಫಲಿತಾಂಶ: ಈ ಬಾರಿ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.42.12, ವಾಣಿಜ್ಯ ವಿಭಾಗದಲ್ಲಿ ಶೇ.64.16 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.66.25ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ನಗರ ವಿದ್ಯಾರ್ಥಿಗಳು ಮೇಲುಗೈ: ಕಳೆದ ಬಾರಿ ಪಿಯು ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶೇ.61.52ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದರು. ಆದರೆ, ಈ ಬಾರಿ ನಗರದ ಪ್ರದೇಶಕ್ಕೆ ಶೇ.57.36 ಫಲಿತಾಂಶ ಬಂದರೆ, ಗ್ರಾಮಾಂತರ ಪ್ರದೇಶಕ್ಕೆ ಶೇ.56.66 ಫಲಿತಾಂಶ ಬಂದಿದೆ.
92 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸುಮಾರು 92 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಅದರಲ್ಲಿ ಎರಡು ಸರಕಾರಿ ಕಾಲೇಜುಗಳನ್ನು ಹೊರತು ಪಡಿಸಿದರೆ, ಉಳಿದ ಎಲ್ಲ ಕಾಲೇಜುಗಳು ಖಾಸಗಿ ಆಡಳಿತಕ್ಕೆ ಒಳಪಟ್ಟಿವೆ. ಇದರಲ್ಲಿ ಬಹುತೇಕ ಕಾಲೇಜುಗಳು ಬೆಂಗಳೂರಿನಲ್ಲಿವೆ. ಗುರುವಾರ ಆಯಾ ಕಾಲೇಜುಗಳಲ್ಲಿ ಅಧಿಕೃತ ಫಲಿತಾಂಶದ ಪಟ್ಟಿಯನ್ನು ಪ್ರಕಟಿಸಲಾಗುವುದು.
ವಿಜ್ಞಾನ ವಿಭಾಗ: -ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜಿನ ಟಿ.ರಕ್ಷಿತಾ 596 ಪ್ರಥಮ ಸ್ಥಾನ. -ಉಡುಪಿಯ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ನೇಹಾ ಡಿ.ಶೆಟ್ಟಿ 595 ದ್ವಿತೀಯ ಸ್ಥಾನ.
-ಬೆಂಗಳೂರಿನ ಎನ್‌ಎಂಕೆಆರ್‌ವಿ ಪಿಯು ಮಹಿಳಾ ಕಾಲೇಜಿನ ಎಂ.ರಮ್ಯಾ, ಉಡುಪಿಯ ವಿದ್ಯೋದಯ ಪಿಯೂ ಕಾಲೇಜಿನ ಪ್ರಜ್ಞಾ 594 ತೃತೀಯ ಸ್ಥಾನ.
ವಾಣಿಜ್ಯ ವಿಭಾಗ: -ಬಿಜಾಪುರದ ವಿಬಿ ದರ್ಬಾರ್ ಕಾಲೇಜಿನ ಸಹನಾ ಕುಲಕರ್ಣಿ; ಬೆಂಗಳೂರಿನ ಎಂಇಎಸ್ ಪಿಯು ಕಾಲೇಜಿನ ವಿ.ಛಾಯಾಶ್ರೀ; ಬೆಂಗಳೂರಿನ ಮಹಾವೀರ ಜೈನ್ ಪಿಯು ಕಾಲೇಜಿನ ದೀಕ್ಷಾ ನಾಯಕ್ 594 ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. -ಬೆಂಗಳೂರಿನ ಪಿಎಸ್ ಪಿಯೂ ಕಾಲೇಜಿನ ಎಸ್.ಎನ್.ನಾಗಪೂಜಾ, ಲೋಲಿಕಾ; ಮೂಡಬಿದಿರೆಯ ಆಳ್ವಾಸ್ ಪಿಯೂ ಕಾಲೇಜಿನ ಎಂ.ಆಶಿಕಾ ನಾರಾಯಣ್, ದಕ್ಷಾ ಜೈನ್; ಕಾರ್ಕಳ ಜ್ಞಾನಸುಧಾ ಕಾಲೇಜಿನ ರಕ್ಷಾ ಶೆಣೈ; ಬೆಂಗಳೂರಿನ ಇಡಿಎಸ್ ಪಿಯೂ ಕಾಲೇಜಿನ ಆದಿಮೂಲಮ್ ನೀಲಿಮಾ 593 ಅಂಕ ಗಳಿಸಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
-ಬೆಂಗಳೂರಿನ ನಾಗಾರ್ಜುನ ಪಿಯೂ ಕಾಲೇಜಿನ ದಿವ್ಯಾಶ್ರೀ 592 ತೃತೀಯ ಸ್ಥಾನ. ಕಲಾ ವಿಭಾಗ: -ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ 585 ಪ್ರಥಮ ಸ್ಥಾನ.
-ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ತಾನಿಯಾ ಮತ್ತು ಕೊಟ್ಟೂರಿನ ಹಿಂದೂ ಪಿಯೂ ಕಾಲೇಜಿನ ಮಂಜಪ್ಪ 580 ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. -ಬೆಂಗಳೂರಿನ ವೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಅನುಶ್ರೀ 578 ತೃತೀಯ ಸ್ಥಾನ.
ಬಾಳೆಹಣ್ಣಿನ ವ್ಯಾಪಾರಿಯ ಮಗಳು ರಾಜ್ಯಕ್ಕೆ ಟಾಪರ್
ಬೆಂಗಳೂರು, ಮೇ 25: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಬಾಳೆಹಣ್ಣು ವ್ಯಾಪಾರಿಯ ಮಗಳು ಅನಿತಾ ಬಸಪ್ಪ 600ಕ್ಕೆ 585 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನಿತಾ ಬಸಪ್ಪ ಅವರ ತಂದೆ ಕೊಟ್ಟೂರು ಬಸ್ ನಿಲ್ದಾಣದಲ್ಲಿ ಬಾಳೆಹಣ್ಣಿನ ವ್ಯಾಪಾರಿಯಾಗಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅನಿತಾ, ಪ್ರಥಮ ರ್ಯಾಂಕ್ ಪಡೆದಿರುವುದಕ್ಕೆ ಸಂತಸವಾಗಿದೆ. ನನ್ನ ಪೋಷಕರು ಬಾಳೆ ಹಣ್ಣು ಮಾರಿ ನನ್ನ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಅವರ ಬದುಕೇ ನನ್ನ ವಿದ್ಯಾಭ್ಯಾಸಕ್ಕೆ ಪ್ರೇರಣೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಶೇ.3ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಫಲಿತಾಂಶ ಶೇ.60.54 ಆಗಿತ್ತು. ಆದರೆ ಪ್ರಸಕ್ತ 2015-16ರಲ್ಲಿ ಇದು ಶೇ.57.20 ಆಗಿದೆ.







