ಚಬಹಾರ್: ಅಮೆರಿಕ ಸಂಸದರ ಕಿರಿಕ್

ವಾಶಿಂಗ್ಟನ್,ಮೇ 25: ವಾಣಿಜ್ಯ ಸಂಪರ್ಕಕ್ಕಾಗಿ ದಕ್ಷಿಣ ಇರಾನ್‌ನಚಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುವ ಭಾರತದ ಯೋಜನೆಯ ಜಾರಿಯಿಂದ ಅಂತಾರಾಷ್ಟ್ರೀಯ ನಿರ್ಬಂಧಗಳ ಉಲ್ಲಂಘನೆಯಾಗಲಿದೆಯೇ ಎಂಬ ಬಗ್ಗೆ ತಾನು ನಿಕಟವಾಗಿ ಪರಿಶೀಲಿಸುವುದಾಗಿ ಅಮೆರಿಕ ಸೋಮವಾರ ಹೇಳಿದೆ.
ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಭಾರತವು, ಇರಾನ್ ಜೊತೆ ಒಪ್ಪಂದದಿಂದಾಗಿ ಟೆಹ್ರಾನ್ ವಿರುದ್ಧ ಹೇರಲಾದ ಅಂತಾರಾಷ್ಟ್ರೀಯ ನಿರ್ಬಂಧಗಳ ಉಲ್ಲಂಘನೆಯಾಗುವುದೇ ಎಂದು ಪ್ರಶ್ನಿಸಿರುವ ಅಮೆರಿಕ ಸೆನೆಟ್ ಸದಸ್ಯರಿಗೆ ಒಬಾಮ ಆಡಳಿತ ಈ ಭರವಸೆಯನ್ನು ನೀಡಿದೆ.ಚ್ಟ‘‘ ಇರಾನ್ ಜೊತೆಗಿನ ಚಟುವಟಿಕೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳ ಬಗ್ಗೆ ನಾವು ಭಾರತಕ್ಕೆ ಮನವರಿಕೆ ಮಾಡಿದ್ದೇವೆ ಎಂದು ದಕ್ಷಿಣ ಹಾಗೂ ಕೇಂದ್ರ ಏಶ್ಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ಮಂಗಳವಾರ ತಿಳಿಸಿದ್ದಾರೆ. ಚಬಹಾರ್ ಒಪ್ಪಂದ ಕೂಡಾ ಈ ನಿರ್ಬಂಧಗಳ ವ್ಯಾಪ್ತಿಯಲ್ಲಿ ಬರುವುದೇ ಎಂಬುದನ್ನು ತಿಳಿಯಲು ನಾವು ಆ ಒಡಂಬಡಿಕೆಯ ವಿವರಗಳನ್ನು ಪರಿಶೀಲಿಸಬೇಕಾಗಿದೆ’’ ಎಂದು ಬಿಸ್ವಾಲ್, ಅಮೆರಿಕ ಸೆನೆಟ್‌ನ ವಿದೇಶಾಂಗ ಸಂಬಂಧಗಳ ಸಮಿತಿಗೆ ತಿಳಿಸಿದ್ದಾರೆ.
ಇರಾನ್‌ನ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು 500 ದಶಲಕ್ಷ ಡಾಲರ್‌ಗಳ ಆರ್ಥಿಕ ನೆರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದರು. ಈ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಕೂಡಾ ಏರ್ಪಟ್ಟಿದೆ. ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವುದರಿಂದ ಭಾರತಕ್ಕೆ ಇರಾನ್, ಅಫ್ಘಾನಿಸ್ತಾನ ಹಾಗೂ ಮಧ್ಯ ಏಶ್ಯ ಜೊತೆಗೆ ವಾಣಿಜ್ಯ ಸಂಪರ್ಕವನ್ನು ಪಡೆಯಲು ಸಾಧ್ಯವಾಗಲಿದೆ. ಇರಾನ್ ತನ್ನ ಅಣುಶಕ್ತಿ ಕಾರ್ಯಕ್ರಮದ ಮೇಲೆ ನಿಯಂತ್ರಣವನ್ನು ವಿಧಿಸುವ ಬಗ್ಗೆ ಒಪ್ಪಂದವೊಂದು ಏರ್ಪಟ್ಟ ಆನಂತರ ಕಳೆದ ವರ್ಷ ಅಮೆರಿಕ ಹಾಗೂ ಯುರೋಪ್ ಆ ದೇಶದ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ರದ್ದುಪಡಿಸಿತ್ತು. ಆದರೆ ಇರಾನ್‌ನೊಂದಿಗೆ ಮಾನವಹಕ್ಕುಗಳು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಕೆಲವೊಂದು ಭಿನ್ನಾಭಿಪ್ರಾಯಗಳು ಇನ್ನೂ ಉಳಿದುಕೊಂಡಿರುವುದರಿಂದ ಆ ದೇಶದ ಜೊತೆ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನು ಇನ್ನೂ ಮುಂದುವರಿಸಲಾಗಿದೆ. ಇರಾನ್ ಜೊತೆಗಿನ ಭಾರತದ ಬಾಂಧವ್ಯವು ಮುಖ್ಯವಾಗಿ ಆರ್ಥಿಕ ಹಾಗೂ ಇಂಧನ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಸಮರ್ಪಕವಾದ ವಾಣಿಜ್ಯ ಮಾರ್ಗವನ್ನು ಹೊಂದುವ ಭಾರತದ ಆವಶ್ಯಕತೆಯನ್ನು ಅಮೆರಿಕ ಆಡಳಿತವು ಅರಿತುಕೊಂಡಿದೆಯೆಂದು ಬಿಸ್ವಾಲ್ ತಿಳಿಸಿದರು. ಆದರೆ ಸೇನಾ ಸಹಕಾರ ಸೇರಿದಂತೆ ಅಮೆರಿಕಕ್ಕೆ ಆತಂಕವುಂಟು ಮಾಡುವ ಕ್ಷೇತ್ರಗಳಲ್ಲಿ ಇರಾನ್ ಜೊತೆ ಭಾರತವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲವೆಂದು ಬಿಸ್ವಾಲ್ ತಿಳಿಸಿದರು.
ಇರಾನ್ ಜೊತೆಗಿನ ಚಟುವಟಿಕೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳ ಬಗ್ಗೆ ನಾವು ಭಾರತಕ್ಕೆ ಮನವರಿಕೆ ಮಾಡಿದ್ದೇವೆ. ಚಬಹಾರ್ ಒಪ್ಪಂದ ಕೂಡಾ ಈ ನಿರ್ಬಂಧಗಳ ವ್ಯಾಪ್ತಿಯಲ್ಲಿ ಬರುವುದೇ ಎಂಬುದನ್ನು ತಿಳಿಯಲು ನಾವು ಆ ಒಡಂಬಡಿಕೆಯ ವಿವರಗಳನ್ನು ಪರಿಶೀಲಿಸಬೇಕಾಗಿದೆ’’
-ನಿಶಾ ದೇಸಾಯಿ ಬಿಸ್ವಾಲ್, ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಹಾಗೂ ಕೇಂದ್ರ ಏಶ್ಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ





