ಅಫ್ಘಾನ್ ತಾಲಿಬಾನ್ ವರಿಷ್ಠನಾಗಿ ಹಬೀಬತುಲ್ಲಾ ಆಯ್ಕೆ

ಕಾಬೂಲ್, ಮೇ 25: ಅಮೆರಿಕದ ಡ್ರೋನ್ ದಾಳಿಯಲ್ಲಿ ತನ್ನ ವರಿಷ್ಠ ಮುಲ್ಲಾ ಅಖ್ತರ್ ಮನ್ಸೂರ್ ಮೃತಪಟ್ಟಿರುವುದನ್ನು ಅಫ್ಘಾನಿಸ್ತಾನದ ತಾಲಿಬಾನ್ ಬುಧವಾರ ದೃಢಪಡಿಸಿದ್ದು, ಆತನ ಉತ್ತರಾಧಿಕಾರಿಯಾಗಿ ಹಬೀಬತುಲ್ಲಾ ಅಖುಂಡ್‌ಝಾದಾನನ್ನು ನೇಮಕಗೊಳಿಸಿದೆ.
‘‘ಶೂರಾ(ಸರ್ವೋಚ್ಚ ಮಂಡಳಿ)ದಲ್ಲಿ ನಡೆದ ಅವಿರೋಧ ಒಪ್ಪಂದವೊಂದರಲ್ಲಿ ಹಬೀಬತುಲ್ಲ್ಲಾ ಅಖುಂಡ್‌ಝಾದಾ ಅವರನ್ನು ತಾಲಿ ಬಾನ್‌ನ ನೂತನ ನಾಯಕ ನಾಗಿ ನೇಮಿಸಲಾಗಿದೆ ಹಾಗೂ ಶೂರಾದ ಎಲ್ಲಾ ಸದಸ್ಯರು, ಅವರಿಗೆ ತಮ್ಮ ನಿಷ್ಠೆಯನ್ನು ಘೋಷಿಸಿದ್ದಾರೆ’’ ಎಂದು ತಾಲಿಬಾನ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ನೈಋತ್ಯ ಪಾಕಿಸ್ತಾನದ ದುರ್ಗಮ ಪ್ರದೇಶವೊಂದರಲ್ಲಿ ರವಿವಾರ ತಾಲಿಬಾನ್‌ನ ಸರ್ವೋಚ್ಚ ಮಂಡಳಿಯು ತುರ್ತು ಸಭೆ ಸೇರಿ ಹಬೀಬತುಲ್ಲಾನನ್ನು ತನ್ನ ನಾಯಕನಾಗಿ ಆಯ್ಕೆ ಮಾಡಿದೆ.
ತಾಲಿಬಾನ್‌ನ ಇನ್ನೋರ್ವ ಪ್ರಮುಖ ನಾಯಕ ಸಿರಾಜುದ್ದೀನ್ ಹಕ್ಕಾನಿ ಹಾಗೂ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಉಮರ್‌ನ ಪುತ್ರ ಮುಲ್ಲಾ ಯಾಕೂಬ್‌ನನ್ನು, ಉಪಮುಖ್ಯಸ್ಥರನ್ನಾಗಿ ಘೋಷಿಸಲಾಗಿದೆ ಎಂದು ಅದು ಹೇಳಿದೆ. ಹಬೀಬತುಲ್ಲಾ, ಈ ಮೊದಲು ಕಳೆದ ಶನಿವಾರ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾಗಿದ್ದ ಮನ್ಸೂರ್ ಕೈಕೆಳಗಿನ ಇಬ್ಬರು ಉಪ ಮುಖ್ಯಸ್ಥರಲ್ಲಿ ಒಬ್ಬನಾಗಿದ್ದ. ತಾಲಿಬಾನ್‌ನ ವರಿಷ್ಠ ಸ್ಥಾನಕ್ಕಾಗಿ ತೀವ್ರವಾದ ಕಚ್ಚಾಟ ಭುಗಿಲೆದ್ದ ಒಂಬತ್ತು ತಿಂಗಳುಗಳ ಬಳಿಕ ಮನ್ಸೂರ್ ನಾಯಕನಾಗಿ ಆಯ್ಕೆಯಾಗಿದ್ದ. ಆದರೆ ಆತನ ಹತ್ಯೆಯು ತಾಲಿಬಾನ್ ನಾಯಕತ್ವಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು.





