ಪೊಲೀಸರಿಂದ ಪ್ರಕರಣ ದಾಖಲು
ಬಜರಂಗ ದಳದಿಂದ ಶಸ್ತ್ರಾಸ್ತ್ರ ತರಬೇತಿ
ಹೊಸದಿಲ್ಲಿ, ಮೇ 25: ಬಜರಂಗ ದಳದ ಕಾರ್ಯಕರ್ತರು ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿರುವ ವೀಡಿಯೊ ಹಿನ್ನೆಲೆಯಲ್ಲಿ ಸಂಘಟನೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವಿಧ ಮತೀಯ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ ನೀಡುವುದು ಸೇರಿದಂತೆ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ಹರಿದಾಡಿದ್ದು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮೇ 10ರಂದು ನಡೆಸಲಾಗಿದ್ದ, ‘ಸ್ವಯಂ ರಕ್ಷಣಾ ಶಿಬಿರದಲ್ಲಿ’ ಶಸ್ತ್ರಾಸ್ತ್ರ ತರಬೇತಿ ನೀಡಲು ಸಂಘಟನೆ ಉದ್ದೇಶಿಸಿತ್ತೆಂಬುದನ್ನು ತೋರಿಸುತ್ತಿದೆ. ಭಯೋತ್ಪಾದಕರನ್ನು ಪ್ರತಿನಿಧಿಸುತ್ತಿದ್ದ ಸ್ಕಲ್ ಕ್ಯಾಪ್‌ಧಾರಿ ಸ್ವಯಂ ಸೇವಕರನ್ನು ಬಜರಂಗದಳದ ಕಾರ್ಯಕರ್ತರು ಎದುರಿಸಿ ಹಿಮ್ಮೆಟ್ಟಿರುವ ಚಿತ್ರಾವಳಿ ಅದರಲ್ಲಿದೆ.
ಭಯೋತ್ಪಾದಕರೊಂದಿಗೆ ಹೋರಾಡಲು ನಮ್ಮ ಭದ್ರತಾ ಪಡೆಗಳು ಸಮರ್ಥವಾಗಿವೆ. ನಾವು ನರೇಂದ್ರ ಮೋದಿಯವರ ಸರಕಾರವನ್ನು ಹೊಂದಿದ್ದೇವೆ. ಯಾರೂ ಚಿಂತೆಪಡೆಬೇಕಾದ ಅಗತ್ಯವಿಲ್ಲವೆಂದು ಬಿಜೆಪಿ ನಾಯಕ ಶಹನವಾಝ್ ಹುಸೇನ್ ಹೇಳಿದ್ದಾರೆ.
50 ಮಂದಿ ಕಾಯಕರ್ತರನ್ನು ಪೊಲೀಸ್ ದೂರು ಅಥವಾ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿ ಮೋಹಿತ್ ಗುಪ್ತಾ ತಿಳಿಸಿದ್ದಾರೆ.
ತಾವು ಮಹಿಳೆಯರನ್ನು ರಕ್ಷಿಸಲು ಹಾಗೂ ಸಹಾಯ ಮಾಡಲು ಯುವಕರಿಗೆ ತರಬೇತಿ ನೀಡುತ್ತಿದ್ದೇವೆ. ಇತರ ಸಮುದಾಯದವರೂ ಇದನ್ನು ಹೇಳಿದ್ದಾರೆ. ತಮ್ಮ ಸ್ವಾಗತವಿದೆಯೆಂದು ವಿಎಚ್‌ಪಿ ನಾಯಕ ರವಿ ಅನಂತ್ ಎಂಬವರು ಹೇಳಿದ್ದಾರೆ.
ತರಬೇತಿ ಶಿಬಿರವು ಒಂದು ವೌಲಿಕ ಕ್ರಮವಾಗಿದೆ. ಯಾರು ತಮ್ಮನ್ನು ರಕ್ಷಿಸಿಕೊಳ್ಳಲಾರರೋ ಅವರು ಕೊನೆಗೆ ದೇಶವನ್ನು ರಕ್ಷಿಸಲಾರರು. ಕೇವಲ ಆತ್ಮ ರಕ್ಷಣೆಗಾಗಿ ಕೆಲವು ಯುವಕರು ಶಸ್ತ್ರಾಸ್ತ್ರ ತರಬೇತಿ ಪಡೆದರೆ ಅದರಲ್ಲಿ ತಪ್ಪೇನೂ ಇಲ್ಲವೆಂದು ಉತ್ತರ ಪ್ರದೇಶ ರಾಜ್ಯಪಾಲ ರಾಮ ನಾಯ್ಕಾ ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ರಾಜ್ಯಪಾಲರ ‘ಆಘಾತಕಾರಿ ಸಮರ್ಥನೆ’ಯನ್ನು ಸಿಪಿಎಂ ನಾಯಕಿ ಬೃಂದಾ ಕಾರಟ್ ಖಂಡಿಸಿದ್ದು, ಅವರು ಸಂವಿಧಾನವನ್ನು ಎತ್ತಿ ಹಿಡಿಯಲು ಬದ್ಧರಾಗಿರಬೇಕೆಂದು ಒತ್ತಿ ಹೇಳಿದ್ದಾರೆ.





