ಚುಟುಕು ಸುದ್ದಿಗಳು
ವ್ಯಾಪಾರಿಗಳಿಗೆ ವಂಚಿಸಿ ವ್ಯಕ್ತಿ ಪರಾರಿ
ಮಂಜೇಶ್ವರ, ಮೇ 25: ಬ್ಯಾಗ್‌ನಲ್ಲಿ ಸಂಸ್ಥೆಯ ಹೆಸರನ್ನು ಮುದ್ರಿಸಿ ಕೊಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ ಮುಂಗಡ ಹಣ ಪಡೆದು ತಮಿಳುನಾಡು ನಿವಾಸಿ ತಲೆ ಮರೆಸಿಕೊಂಡಿರುವ ಘಟನೆ ಕುಂಬಳೆಯಲ್ಲಿ ನಡೆದಿದೆ.
ಕುಂಬಳೆಯ ಕೆಲವು ವ್ಯಾಪಾರಿಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಮಿಳುನಾಡು ಕೊಯಮುತ್ತೂರ್‌ನ ಉಕ್ರಂ ಹೌಸ್‌ನ ಎಂ.ಎ.ರಶೀದ್ ಎಂಬಾತ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ. ವ್ಯಾಪಾರ ಸಂಸ್ಥೆಗಳು ಸಾಮಗ್ರಿಗಳನ್ನು ತುಂಬಿಸಿಕೊಡುವ ಬ್ಯಾಗ್ ಹಾಗೂ ಪಾಲಿಥಿನ್ ಕವರ್‌ಗಳ ಮೇಲೆ ಸಂಸ್ಥೆಯ ಹೆಸರನ್ನು ಕಡಿಮೆ ಖರ್ಚಿನಲ್ಲಿ ಮುದ್ರಿಸಿ ಕೊಡುವುದಾಗಿ ತಿಳಿಸಿ ಪ್ರತಿಯೊಬ್ಬ ವ್ಯಾಪಾರಿ ಯಿಂದ 800 ರೂ.ಗಳಂತೆ ಪಡೆದು ಒಂದು ತಿಂಗಳಾದರೂ ಯಾವುದೇ ಮಾಹಿತಿಯಿಲ್ಲದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ವಂಚನೆಗೊಳಗಾದ ಬಗ್ಗೆ ತಿಳಿದುಬಂದಿದೆಯೆಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ
ಮಂಜೇಶ್ವರ, ಮೇ 25: ಗ್ಯಾರೇಜ್‌ನೊಳಗೆ ನೌಕರನೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ನಗರದ ಪಿಲಿಕುಂಜೆ ರಸ್ತೆಯಲ್ಲಿರುವ ಗ್ಯಾರೇಜ್ ನೌಕರ, ಪುತ್ತೂರು ನಿವಾಸಿ ಥಾಮಸ್ ಲೂಯೀಸ್ ಡಿಸೋಜಾ(52) ಬುಧವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ಕಳೆದ ಒಂದು ವರ್ಷದಿಂದ ಇಲ್ಲಿಯ ಗ್ಯಾರೇಜ್ ಒಂದರಲ್ಲಿ ನೌಕರರಾಗಿದ್ದು, ಇಲ್ಲಿಯೇ ವಾಸಿಸುತ್ತಿದ್ದರು. ಈ ಮಧ್ಯೆ ಊರಿಗೆ ತೆರಳಿದ್ದ ಇವರು ಮಂಗಳವಾರ ಬೆಳಗ್ಗೆ ಮರಳಿದ್ದರು. ಆದರೆ ಬುಧವಾರ ಬೆಳಗ್ಗೆ ಇತರ ನೌಕರರು ಕೆಲಸಕ್ಕಾಗಿ ಬಂದಾಗ ಲೂಯಿಸ್ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಪೊಲೀಸರು ಅಂದಾ ಜಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಪೊಸೋಟು: ಪಿಗ್ಮಿ ಸಂಗ್ರಾಹಕನ ದರೋಡೆ ಯತ್ನ
ಮಂಜೇಶ್ವರ, ಮೇ 25: ಪಿಗ್ಮಿ ಸಂಗ್ರಾಹಕನನ್ನು ತಡೆದು ದರೋಡೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಉದ್ಯಾವರ ಸಮೀಪದ ಪೊಸೋಟುವಿನಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸಿದ್ದ ಇಬ್ಬರು ಕೃತ್ಯ ನಡೆಸಿದ್ದು, ಪಿಗ್ಮಿ ಸಂಗ್ರಾಹಕ, ಮಂಜೇಶ್ವರ ಗೋವಿಂದ ಪೈ ಕಾಲೇಜು ಬಳಿಯ ನಿವಾಸಿ ವೇಣುಗೋಪಾಲ(36)ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಬಡಾಜೆ ಶಾಖೆಯ ಪಿಗ್ಮಿ ಹಣ ಸಂಗ್ರಾಹಕ ವೇಣುಗೋಪಾಲ ಮಂಗಳ ವಾರ ರಾತ್ರಿ 9ರ ವೇಳೆಗೆ ಪೊಸೋಟ್ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್‌ನಲ್ಲಿ ಬಂದು ಮಂಗಳೂರಿಗೆ ಹೋಗುವ ರಸ್ತೆ ಯಾವುದೆಂದು ಕೇಳಿ ವೇಣುಗೋಪಾಲರನ್ನು ದೂಡಿ ಹಣದ ಬ್ಯಾಗ್ ಅಪಹರಿಸಲೆತ್ನಿಸಿದ್ದರು. ಈ ವೇಳೆ ರಸ್ತೆಗೆ ಬಿದ್ದ ವೇಣುಗೋಪಾಲ್ ಬ್ಯಾಗನ್ನು ಬಿಗಿಯಾಗಿ ಹಿಡಿದಾಗ ದುಷ್ಕರ್ಮಿಗಳು ತಲವಾರಿನಿಂದ ಕೈಗೆ ಘಾಸಿಗೊಳಿಸಿದರು. ವೇಣುಗೋಪಾಲರ ಬೊಬ್ಬೆಕೇಳಿ ಸ್ಥಳೀಯರು ಧಾವಿಸಿ ಬರುತ್ತಿರುವಂತೆ ದರೋಡೆಕೋರರು ಬೈಕ್‌ನಲ್ಲಿ ಪರಾರಿ ಯಾದರು. ಆಕ್ರಮಣದಿಂದ ವೇಣುಗೋಪಾಲರ ಎಡಕೈ ನರ ಕತ್ತರಿಸಲ್ಪಟ್ಟಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಿಧೆಡೆಗಳಿಂದ ಸಂಗ್ರಹಿಸಿದ ಸುಮಾರು 40 ಸಾವಿರ ರೂ. ನಗದು ಇತ್ತೆಂದು ತಿಳಿದುಬಂದಿದೆ. ಘಟನೆಯನ್ನು ಕೇರಳ ಕೊ ಅಪರೇಟಿವ್ ಬ್ಯಾಂಕ್ ಎಂಪ್ರೋ ಯೂನಿಯನ್, ಸಿಐಟಿಯು ಮಂಜೇಶ್ವರ ವಲಯ ಸಮಿತಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಸಿಪಿಎಂ ಲೋಕಲ್ ಸಮಿತಿ ಖಂಡಿಸಿದ್ದು, ದರೋಡೆಕೋರರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ವ್ಯಕ್ತಿ ನಾಪತ್ತೆ: ದೂರು
ಕಡಬ, ಮೇ 25: ಠಾಣಾ ವ್ಯಾಪ್ತಿಯ ಹಳೆನೇರಂಕಿ ಗ್ರಾಮದ ಅರಟಿಗೆ ನಿವಾಸಿ ರಾಮಣ್ಣ ಗೌಡ ಎಂಬವರು ಮೇ 22ರಂದು ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ ಹಾಗೂ ತುಳು ಭಾಷೆ ಬಲ್ಲವರಾಗಿದ್ದು, ಕೋಲು ಮುಖ ಹಾಗೂ ಎಣ್ಣೆ ಕಪ್ಪು ಮೈ ಬಣ್ಣವನ್ನು ಹೊಂದಿರುತ್ತಾರೆ. ಇವರನ್ನು ಎಲ್ಲಾದರೂ ಕಂಡಲ್ಲಿ ಕಡಬ ಠಾಣೆ 08251-260044 ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಮಹಿಳೆ ನಾಪತ್ತೆ
ಉಡುಪಿ, ಮೇ 25: ಸಂತೆಕಟ್ಟೆಯ ಸ್ಪಂದನಾ ಅಪಾರ್ಟ್‌ಮೆಂಟ್‌ನಿವಾಸಿ ನಿತ್ಯಾನಂದ ಎಂಬವರ ಪತ್ನಿ, ಉಡುಪಿಯ ಸರಕಾರಿ ಆಸ್ವತ್ರೆಯ ಉದ್ಯೋಗಿಪ್ರಿಯಾಂಕಾ ಡಿಸೋಜ(35) ಎಂಬವರು ಮೇ 21ರಂದು ಕೆಲಸಕ್ಕೆಂದು ಆಸ್ಪತ್ರೆಗೆ ಹೋದ ವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಧನ
ಮಹ್ಮೂದ್ ಹಾಜಿ
ಕುಂದಾಪುರ, ಮೇ 25: ಕೋಡಿಯ ಮಹ್ಮೂದ್ ಹಾಜಿ(68) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಸಮಾಜ ಸೇವಕರಾಗಿದ್ದ ಮಹ್ಮೂದ್ ಹಾಜಿ ಕೋಡಿಯ ಮುಲ್ಲಾ ಕುಟುಂಬದ ಹಿರಿಯರಾಗಿದ್ದರು. ಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಲವು ವರ್ಷಗಳಿಂದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಪ್ರಾಸಿಸ್ ಸಲ್ಡಾನ
ವಾಮದಪದವು, ಮೇ 25: ವಾಮದಪದವಿನ ಉದ್ಯಮಿ ಪ್ರಾಸಿಸ್ ಸಲ್ಡಾನ (85) ಅಲ್ಪಕಾಲದ ಅಸೌಖ್ಯದಿಂದ ಮೇ 24ರಂದು ನಿಧನ ಹೊಂದಿದರು. ಮೃತರು ಪತ್ನಿ, 10 ಹೆಣ್ಣು ಹಾಗೂ 3 ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ಮೇ 25ರಂದು ವಾಮದ ಪದವಿನ ಇನ್ಫೆಂಟ್ ಜೀಸಸ್ ಚರ್ಚಿನಲ್ಲಿ ನಡೆಯಿತು.







