ಭಾರತದ ಭೂಪಟ ವಿಧೇಯಕಕ್ಕೆ ಪಾಕಿಸ್ತಾನ ತೀವ್ರ ವಿರೋಧ
ವಿಶ್ವಸಂಸ್ಥೆ,ಮೇ 25: ಭಾರತದ ಪ್ರಸ್ತಾಪಿತ ಭೂಪಟ ವಿಧೇಯಕದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಲು ಪಾಕಿಸ್ತಾನವು ನಿರ್ಧರಿಸಿದೆ. ‘‘ವಿವಾದಿತ ಭೂಪ್ರದೇಶವಾದ ಜಮ್ಮುಕಾಶ್ಮೀರವನ್ನು, ಭಾರತದ ಅವಿಭಾಜ್ಯ ಅಂಗವೆಂದು ವಿಧೇಯಕದಲ್ಲಿ ಬಿಂಬಿಸಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮದ ಉಲ್ಲಂಘನೆಯಾಗಿದ್ದು, ಇದು ವಸ್ತುನಿಷ್ಠವಾಗಿ ಸರಿಯಲ್ಲ ಹಾಗೂ ನೈತಿಕವಾಗಿ ಅಸ್ವೀಕಾರಾರ್ಹ’’ ಎಂದು ಅದು ಹೇಳಿದೆ.
ಕಾಶ್ಮೀರ ಕುರಿತ ನಕ್ಷೆಯ ಬಗ್ಗೆ ಭಾರತದ ಸಂಸತ್‌ನಲ್ಲಿ ಮಂಡಿಸಲಾದ ಕರಡು ವಿಧೇಯಕದ ಬಗ್ಗೆ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನವು ಕಳೆದ ವಾರ ಆಗ್ರಹಿಸಿತ್ತು. ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹಾಗೂ ತಿಂಗಳಾವಧಿಗೆ ಭದ್ರತಾಮಂಡಳಿಯ ಅಧ್ಯಕ್ಷರಾಗಿರುವ ಈಜಿಪ್ಟ್‌ನ ಅಬ್ದುಲ್ಲತೀಫ್ ಅಬೌಲಟ್ಟಾ ಅವರಿಗೆ ಈ ಬಗ್ಗೆ ಪತ್ರ ಸಹ ಬರೆದಿದ್ದರು. ಪಾಕ್ ಬರೆದಿರುವ ಪತ್ರವನ್ನು ವಿಶ್ವಸಂಸ್ಥೆಯು ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದೆ. ಪತ್ರದಲ್ಲಿ ಲೋಧಿ ಅವರು ಭಾರತವು ಲೋಕಸಭೆಯಲ್ಲಿ ಮಂಡಿಸಿರುವ ‘‘ಭೌಗೋಳಿಕ ಮಾಹಿತಿ ನಿಯಂತ್ರಣ ಕರಡು ವಿಧೇಯಕ-2016’ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತವು ತನ್ನ ಅಧಿಕೃತ ಭೂಪಟದಲ್ಲಿ ಜಮ್ಮುಕಾಶ್ಮೀರವನ್ನು ತನ್ನ ಅವಿಭಾಜ್ಯ ಅಂಗವೆಂದು ಬಿಂಬಿಸಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೆಂದು ಲೋಧಿ ಪತ್ರದಲ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಆಶ್ರಯದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತರಹಿತವಾದ ಜನಮತಗಣನೆ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯವು ತನ್ನ ಬದ್ಧತೆಯನ್ನು ಈಡೇರಿಸಬೇಕೆಂದು ಜಮ್ಮುಕಾಶ್ಮೀರದ ಜನತೆ ಕಳೆದ 65 ವರ್ಷಗಳಿಂದಲೂ ನಿರೀಕ್ಷಿಸುತ್ತಿದ್ದಾರೆಂದು ಆಕೆ ಹೇಳಿದ್ದಾರೆ.





