ಬಂಡವಾಳ ವಸ್ತುಗಳ ನೀತಿಗೆ ಸರಕಾರದ ಒಪ್ಪಿಗೆ
ಹೊಸದಿಲ್ಲಿ,ಮೇ 25: 2025ರ ವೇಳೆಗೆ ಭಾರತವನ್ನು ವಿಶ್ವದರ್ಜೆಯ ಕೇಂದ್ರವನ್ನಾಗಿಸುವ ಮತ್ತು 21 ಲಕ್ಷಕ್ಕೂ ಅಧಿಕ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಿರುವ ಭಾರತದ ಮೊಟ್ಟಮೊದಲ ಬಂಡವಾಳ ವಸ್ತುಗಳ ನೀತಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ತನ್ನ ಹಸಿರು ನಿಶಾನೆಯನ್ನು ತೋರಿಸಿದೆ.
ಭಾರತವನ್ನು ಬಂಡವಾಳ ವಸ್ತುಗಳ ವಿಶ್ವದರ್ಜೆಯ ಕೇಂದ್ರವನ್ನಾಗಿ ರೂಪಿಸುವ ಕನಸನ್ನು ಸಾಕಾರಗೊಳಿಸಲು ಈ ನೀತಿಯು ನೆರವಾಗಲಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಆಧಾರ ಸ್ಥಂಭವಾಗಿ ಒಟ್ಟಾರೆ ತಯಾರಿಕೆ ರಂಗದಲ್ಲಿ ಅದು ಪ್ರಮುಖ ಪಾತ್ರವನ್ನೂ ವಹಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಬಂಡವಳ ವಸ್ತುಗಳ ಉತ್ಪಾದನೆಯನ್ನು 2014-15ರ 2,30,000 ಕೋ.ರೂ.ಗಳಿಂದ 2025ರಲ್ಲಿ 7,50,000 ಕೋ.ರೂ.ಗೆ ಹೆಚ್ಚಿಸುವ ಮತ್ತು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಈಗಿನ 8.4 ಮಿಲಿಯನ್ನಿಂದ 30 ಮಿಲಿಯನ್ಗೆ ಹೆಚ್ಚಿಸುವ ಸ್ಪಷ್ಟ ಗುರಿಯನ್ನು ಈ ನೀತಿಯು ಹೊಂದಿದೆ. ಅಲ್ಲದೆ ಒಟ್ಟೂ ತಯಾರಿಕೆ ಚಟುವಟಿಕೆಯಲ್ಲಿ ಬಂಡವಾಳ ವಸ್ತುಗಳ ಪಾಲನ್ನು ಈಗಿನ ಶೇ.12ರಿಂದ 2025ರಲ್ಲಿ ಶೇ.20ಕ್ಕೇರಿಸುವ ದೂರದೃಷ್ಟಿಯನ್ನೂ ಹೊಂದಲಾಗಿದೆ ಎಂದು ರೈಲ್ವೆ ಸಚಿವ ಸುರೇಶ ಪ್ರಭು ಅವರು ತಿಳಿಸಿದರು.