ಸ್ಟಿಂಗ್ ಆಪರೇಶನ್ ಪ್ರಸಾರಿಸಿದ ಚ್ಯಾನೆಲ್ಗೆ ನಿಷೇಧ ಹೇರಿದರೆಂದು ಆರೋಪಿಸಿ ಬಿಜೆಪಿಯಿಂದ ರಾವತ್ ಪ್ರತಿಕೃತಿ ದಹನ!

ಡೆಹ್ರಾಡೂನ್, ಮೇ 26: ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಸ್ಟಿಂಗ್ ಆಪರೇಶನ್ ಮಾಡಿದ ಖಾಸಗಿ ಟಿವಿಯ ಪ್ರಸಾರವನ್ನು ಮುಚ್ಚಿಸಿದ ಆರೋಪವನ್ನು ಹೊರಿಸಿ ಅವರ ಪ್ರತಿಕೃತಿಯನ್ನು ಬಿಜೆಪಿ ಸುಟ್ಟುಹಾಕಿದೆ. ಬಿಜೆಪಿ ಪ್ರದೇಶ ಅಧ್ಯಕ್ಷ ಅಜಯ್ ಬಟ್ ಹೇಳಿಕೆ ನೀಡಿ"ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಟೀಕೆಯನ್ನು ಆಲಿಸಲು ಸಿದ್ಧರಿಲ್ಲ. ಅದಕ್ಕಾಗಿ ಅವರು ಯಾವ ಹಂತಕ್ಕೂ ಇಳಿಯಬಲ್ಲರು. ತುರ್ತುಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರ ಮೊದಲು ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿತ್ತು. ಈಗ ಹರೀಶ್ ರಾವತ್ರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಹೊರಟಿದ್ದಾರೆ" ಎಂದಿದ್ದಾರೆ. ಆದರೆ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಸುರೇಂದ್ರ ಅಗರ್ವಾಲ್ ಈ ಆರೋಪವನ್ನು ಖಂಡಿಸಿದ್ದಾರೆ. ಸರಕಾರವನ್ನು ಉರುಳಿಸುವ ಸಂಚು ವಿಫಲವಾದ್ದರಿಂದ ಹತಾಶವಾದ ಬಿಜೆಪಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಅಗ್ರವಾಲ್ ಗುಡುಗಿದ್ದಾರೆ.
ಕಾಂಗ್ರೆಸ್ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಿದೆ ಎಂದು ಅಗರ್ವಾಲ್ ಹೇಳಿದ್ದಾರೆ" ಯಾವುದೇ ಟೆಲಿವಿಷನ್ ಚ್ಯಾನೆಲ್ನ ವಿರುದ್ಧ ಯಾವುದೇ ರೀತಿಯ ನಿಷೇಧ ಹೇರಲಾಗಿಲ್ಲ. ನಾವು ನಿಷೇಧದ ಪರವಿಲ್ಲ. ಅದೇ ವೇಳೆ ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭದಲ್ಲಿ ನಮಗೆ ಗೌರವಗಳಿವೆ" ಎಂದು ಅವರು ನುಡಿದಿದ್ದಾರೆ. ಆದರೆ ಟಿವಿ ಚ್ಯಾನೆಲ್ನ ಪ್ರತಿನಿಧಿಯೊಬ್ಬರು ಸ್ಟಿಂಗ್ ಆಪರೇಷನ್ನ ಬಳಿಕ ಮುಖ್ಯಮಂತ್ರಿ ರಾವತ್ರನ್ನುಪ್ರಶ್ನಿಸಲು ಕರೆಸಿಕೊಂಡ ಬಳಿಕ ರಾಜ್ಯದ ಬಹುತೇಕ ಕಡೆ ತಮ್ಮ ಚ್ಯಾನೆಲ್ನ ಪ್ರಸಾರವನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಪೆರೇಡ್ ಮೈದಾನದಲ್ಲಿ ಇದನ್ನು ವಿರೋಧಿಸಿ ಮುಖ್ಯಮಂತ್ರಿಯ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾರೆ. ರಾಜ್ಯಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದುವರದಿಯಾಗಿದೆ.